

ಮೈಸೂರು; ಮೈಸೂರು ತಾಲೂಕಿನ ವರುಣ ಗ್ರಾಮದಲ್ಲಿ ಹಾಸನದ ಚಾಮುಂಡೇಶ್ವರಿ ಶುಗರ್ ಫಾಕ್ಟರಿಯಲ್ಲಿ ಕೆಲಸದಿಂದ ವಜಾಗೊಂಡ ನೌಕರನೊಬ್ಬ ಮುಖ್ಯಮಂತ್ರಿಯ ಗಮನ ಸೆಳೆಯಲು 8 ಗಂಟೆ ಕಾಲ ಮೊಬೈಲ್ ಟವರ್ ಏರಿ ರಂಪಾಟ ನಡೆಸಿದ್ದಾನೆ.
ಅಗ್ನಿ ಶಾಮಕದ ಸಿಬ್ಬಂದಿಯ ನೆರವಿನೊಂದಿಗೆ ಹರಸಾಹಸಪಟ್ಟು ಈತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲು ಪೊಲೀಸರು ಸಫಲರಾಗಿದ್ದಾರೆ.
ಕೆ.ಆರ್.ನಗರದ ಸಿದ್ದನಕೊಪ್ಪಲಿನ ನಿವಾಸಿ ಬೋರೇಗೌಡ(45) ಮೊಬೈಲ್ ಟವರ್ ಏರಿದ ಮಾಜಿ ನೌಕರ. ಹಾಸನದಲ್ಲಿರುವ ಚಾಮುಂಡೇಶ್ವರಿ ಶುಗರ್ ಫಾಕ್ಟರಿಯಲ್ಲಿ ನೌಕರನಾಗಿದ್ದ ಬೋರೇಗೌಡನನ್ನು ಕಾರಣಾಂತರದಿಂದ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ತನಗೆ ಅನ್ಯಾಯವಾಗಿದೆ. ನ್ಯಾಯ ಸಿಗಬೇಕಾದರೆ ಮುಖ್ಯಮಂತ್ರಿ ಗಮನ ಸೆಳೆಯಬೇಕು ಎಂದು ಈ ತೀರ್ಮಾನಕ್ಕೆ ಬಂದಿದ್ದಾನೆ.
ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರವಾದ ವರುಣ ಗ್ರಾಮದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಈ ವಿಷಯ ವರುಣ ಪೊಲೀಸರಿಗೆ ತಲುಪಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅವರು, ಕೆಳಗೆ ಇಳಿಸಲು ಯತ್ನಿಸಿದರು. ಆದರೆ ಬೋರೇಗೌಡ ಸಂಜೆಯವರೆಗೂ ಟವರ್‌ನಿಂದ ಇಳಿಯದೆ ಸತಾಯಿಸಿದ್ದಾನೆ. ಬೋರೇಗೌಡನ ಕುಟುಂಬದವರು ಸಹ ಬಂದು ಕೆಳಗೆ ಇಳಿಯುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೂ ಈತ ಜಗ್ಗಲಿಲ್ಲ.
ಹೀಗಾಗಿ, ಶುಗರ್ ಫಾಕ್ಟರಿಯ ಅಧಿಕಾರಿಗಳಿಗೆ ಸ್ಥಳಕ್ಕೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಸಂಜೆ 6ಗಂಟೆಯ ಹೊತ್ತಿಗೆ ಸ್ಥಳಕ್ಕೆ ಬಂದ ಕಾರ್ಖಾನೆಯ ಅಧಿಕಾರಿಗಳು, ಕೆಳಗಿಳಿಸಿದರೆ ಉದ್ಯೋಗ ಸಂಬಂಧ ಮಾತನಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇವರ ಮಾತನ್ನು ನಂಬಿದ ಬೋರೇಗೌಡ ಟವರ್‌ನಿಂದ ಕೆಳಗೆ ಇಳಿಯಲು ಮುಂದಾದ. ಅಗ್ನಿಶಾಮಕ ದಳದ ಸಿಬ್ಬಂದಿ ಈತನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ.
ಬಳಿಕ ಠಾಣೆಗೆ ಕರೆದೊಯ್ದ ಪೊಲೀಸರು ಬೋರೇಗೌಡನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಎಎಸ್ಪಿ ಡಾ.ನಂದಿನಿ ಇತರರು ಭೇಟಿ ನೀಡಿದ್ದರು.