ಹಿಮಾಲಯ ಏರಲು ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಸಾಮರ್ಥ್ಯವೂ ಅಗತ್ಯ: ಪರ್ವತಾರೋಹಿ ಡಾ. ಉಷಾ ಹೆಗ್ಡೆ

Himalaya (FILEminimizer)
Published on

ಮೈಸೂರು: ಹಿಮಾಲಯ ಪರ್ವತ ಏರಲು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ. ದೈಹಿಕ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಮಾನಸಿಕವಾಗಿ ಬಲಶಾಲಿಯಾಗಿದ್ದರೆ ಮಾತ್ರ ಹಿಮಾಲ ಪರ್ವತಾರೋಹಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯ ಎಂದು ಹಿಮಾಲಯ ಪರ್ವತಾರೋಹಿ ಡಾ. ಉಷಾ ಹೆಗ್ಡೆ ಅಭಿಪ್ರಾಯಪಟ್ಟರು.

ಜೆಪಿ ನಗರದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ಇಲ್ಲಿನ ಆಕ್ಸಿಜನ್ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಹಿಮಾಲಯದಲ್ಲಿ ಶೇ.40 ರಿಂದ 50 ರಷ್ಟು ಕಡಿಮೆ ಇರುತ್ತದೆ. ಅದಕೋಸ್ಕರ ಚೆನ್ನಾಗಿ ಉಸಿರಾಟವುದನ್ನು ಅಭ್ಯಾಸ ಮಾಡಿದೆ. ಇದಕೋಸ್ಕರ ಪ್ರಾಣಾಯಾಮ ಅಭ್ಯಾಸ ಮಾಡಿದೆ. ಹಿಮಾಲಯ ಪರ್ವತಾರೋಹಣಕ್ಕೆ ಧ್ಯಾನ ಮತ್ತು ಪ್ರಾಣಾಯಾಮ ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಾನು ಓಟವನ್ನು ಪ್ರಾರಂಭಿಸಿದ್ದು 2012ರಲ್ಲಿ. ಆ ಸಂದರ್ಭ 5 ಕಿ.ಮೀ. ಓಡುತ್ತಿದ್ದೆ. ನಂತರ ಬೆಂಗಳೂರಿನಲ್ಲಿ ನಡೆದ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಮೊದಲ ಬಹುಮಾನ ಪಡೆದೆ. ಇದು ನನಗೆ ಹೆಚ್ಚು ಸ್ಫೂರ್ತಿ ದೊರೆಯಿತು. ಆ ನಂತರ ಆಸ್ಟ್ರೇಲಿಯಾದಲ್ಲಿ ನಡೆದ ಐರನ್ ಮ್ಯಾನ್‌ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ದೈಹಿಕ ಸದೃಢತೆ ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಮೂರು ವರ್ಷದ ಹಿಂದೆ ಹಿಮಾಲಯ ಪರ್ವತ ಏರುವ ನಿರ್ಧಾರ ಮಾಡಿ ಅದರಲ್ಲಿ ಯಶಸ್ವಿಯಾದೆ ಎಂದರು.

ಹಿಮಾಲಯ ಪರ್ವತ ಏರಲು ಮೈಸೂರಿನಲ್ಲಿಯೇ ತರಬೇತಿ ಪಡೆದೆ. ಬೆನ್ನ ಮೇಲೆ 14 ಕೆ.ಜಿ. ಭಾರ ಹೊತ್ತುಕೊಂಡು ಚಾಮುಂ ಡಿಬೆಟ್ಟವನ್ನು ನಾಲ್ಕೈದು ಬಾರಿ ಹತ್ತಿ ಇಳಿಯುತ್ತಿದ್ದೆ. ಇದರ ಜತೆಗೆ ವ್ಯಾಯಾಮ, ಪ್ರಾಣಯಾಮ ಮಾಡುತ್ತಿದ್ದೆ. ಏಕಾಏಕಿ ಹಿಮಾಲಯ ಪರ್ವತ ಏರಲು ಸಾಧ್ಯವಿಲ್ಲ. ಇದಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಸಿದ್ಧರಾಗಬೇಕು. ಚಾಮುಂಡಿಬೆಟ್ಟ ಕೇವಲ 1 ಸಾವಿರ ಮೀಟರ್ ಎತ್ತರ ಹೊಂದಿದೆ. ಆದರೆ, ಹಿಮಾಲಯ 8,800 ಮೀಟರ್ ಎತ್ತರ ಇದೆ. ಅಲ್ಲದೆ, ಉಷ್ಣಾಂಶ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಹಾಗಾಗಿ ಕೇವಲ 1 ಸಾವಿರ ಮೀಟರ್ ಎತ್ತರದ ಚಾಮುಂಡಿಬೆಟ್ಟ ಏರಿ ನೇರವಾಗಿ ಹಿಮಾಲಯ ಪರ್ವತ ಏರಲು ಪ್ರಾರಂಭಿಸಿದರೆ ನಮ್ಮ ದೇಹ ಸ್ಪಂದಿಸುವುದಿಲ್ಲ. ಇದಕೋಸ್ಕರ ಹಿಮಾಲಯ ಪರ್ವತ ಏರುವ ಮುನ್ನ ನೇಪಾಳ, ಕಾಶಿ, ಲಡಾಕ್‌ನಲ್ಲಿ 6 ಸಾವಿರ ಮೀಟರ್ ಎತ್ತರದ ಪರ್ವತಗಳನ್ನು ಹತ್ತಿ ಇಳಿದು ಅಭ್ಯಾಸ ಮಾಡಿದೆ. ಹಿಮಾಲಯದ ವಾತಾವರಣಕ್ಕೆ ನನ್ನ ದೇಹ ಹೊಂದಿಕೊಳ್ಳುವುದೇ ಎಂದು ತಿಳಿದುಕೊಳ್ಳುವ ಸಲುವಾಗಿ ಚಳಿಗಾಲದ ಸಂದರ್ಭದಲ್ಲಿ ನೇಪಾಳಕ್ಕೆ ಭೇಟಿ ನೀಡಿ ಪರ್ವತಾರೋಹಣ ಮಾಡಿದ್ದೆ. ಹಿಮಾಲ ಪರ್ವತ ಏರಲು ಈ ರೀತಿಯ ಸಿದ್ಧತೆಗೆ ಮೂರು ವರ್ಷಗಳು ಬೇಕಾಯಿತು ಎಂದರು.

ನೇಪಾಳದ ಮೂಲಕ ಹಿಮಾಲಯ ಪರ್ವತಾರೋಹಣ ಕೈಗೊಳ್ಳಲು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಅವಕಾಶ ದೊರೆಯುತ್ತದೆ. ಇದಕ್ಕೆ ನೇಪಾಳ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕು. ಅನುಮತಿ ನೀಡುವ ಸಂದರ್ಭ ವೈದ್ಯಕೀಯ ದೃಢೀಕರಣ ಪತ್ರ, ವಿವಿಧ ಪರ್ವತಗಳನ್ನು ಏರಿರುವ ಮಾಹಿತಿ ಪಡೆಯುತ್ತಾರೆ. ನಂತರ ಈ ಬಗ್ಗೆ ಅಲ್ಲಿನ ಸರ್ಕಾರ ಪರಿಶೀಲಿಸಿ ಅನುಮತಿ ನೀಡುತ್ತದೆ. ಈ ಬಾರಿ ವಿಶ್ವದ 421 ಪರ್ವತಾರೋಹಿಗಳು ಪರ್ವತಾರೋಹಣ ಮಾಡಿದರು. ಅದರಲ್ಲಿ 51 ಭಾರತೀಯರು ಇದ್ದರು ಎಂದು ಹೇಳಿದರು.

ಇಂದು ನಾವು ಎದುರಿಸುವ ಕಷ್ಟಗಳು ಜೀವನ ಪರ್ಯಂತ ಇರುವುದಿಲ್ಲ. ಹಾಗಾಗಿ ಕಷ್ಟಗಳ ನಡುವೆಯೂ ನಾವು ಸಾಧನೆ ಮಾಡಲು ಪ್ರಯತ್ನಿಸಬೇಕು. ಕ್ರೀಡೆಯ ಜತೆಗೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಾಲಾ ಶಿಕ್ಷಣ ವಿಭಾಗದ ಸಹ ನಿರ್ದೇಶಕ ಎಂ. ಶಿವಮಾದಪ್ಪ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಎದುರಿಸಲು ಸಜ್ಜಾಗಬೇಕು. ಇದಕ್ಕೆ ಬೇಕಾದ ಅಗತ್ಯವಾದ ತಯಾರಿಯನ್ನು ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಾಧನೆ ತೋರಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಎಲ್. ಮೋನಿಕಾ, ಪ್ರಾಂಶುಪಾಲ ನಿರಂಜನ್, ಕ್ರೀಡಾ ವೇದಿಕೆ ಸಂಚಾಲಕ ನಾಗರಾಜ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net