

* ರಸ್ತೆಯ ಎರಡೂ ಕಡೆ ತಡೆಗೋಡೆ ಇಲ್ಲದಿರುವುದು ವಾಹನ ಸವಾರರಿಗೆ ಮಾರಕ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ತಾಲೂಕಿನ ಕೈಲಾಂಚ ಹೋಬಳಿಯ ಅಂಕನಹಳ್ಳಿ ಊರ ಮುಂದಿನ ಕೆರೆಗೆ ತಡೆಗೋಡೆ ಇಲ್ಲದಿರುವುದು ಅಪಾಯವನ್ನು ಆಹ್ವಾನಿಸುವಂತಿದೆ.
ಕೈಲಾಂಚ ಗ್ರಾಪಂಗೆ ಒಳಪಡುವ ಕೆರೆ ಇದಾಗಿದ್ದು, ಅಂಕನಹಳ್ಳಿಗೆ ಹೊಂದಿಕೊAಡಿದೆ. ಕೆರೆ ಏರಿ ಸುಮಾರು 400 ಮೀಟರ್ ಉದ್ದವಿದೆ. ಏರಿಯು ಎರಡೂ ಭಾಗದಲ್ಲಿ ಆಳವಾಗಿದೆ. ಜತೆಗೆ ತಿರುವುಗಳಿವೆ. ಈ ರಸ್ತೆ ಕೈಲಾಂಚ ಹೋಬಳಿ ಕೇಂದ್ರದಿಂದ ಅಂಕನಹಳ್ಳಿ ಮಾರ್ಗವಾಗಿ ಬನ್ನಿಕುಪ್ಪೆ, ಕವಣಾಪುರ, ಚನ್ನಪಟ್ಟಣ ರಸ್ತೆ, ರಾಮನಗರದ ಕಡೆ, ವಿಭೂತಿಕೆರೆ, ಕೆ.ಪಿ. ದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಕೆರೆ ಏರಿ ಮೇಲೆ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಿಸಿ, ನಿರ್ವಹಣೆ ಮಾಡುತ್ತಿದೆ. ಆದರೆ, ರಸ್ತೆಯ ಎರಡೂ ಕಡೆ ತಡೆಗೋಡೆ ಇಲ್ಲದಿರುವುದು ವಾಹನ ಸವಾರರಿಗೆ ಮಾರಕವಾಗಿದೆ.
ಕೈಲಾಂಚ ಹೋಬಳಿ ಕೇಂದ್ರಸ್ಥಾನವಾಗಿರುವ ಕಾರಣ ಕೈಲಾಂಚದಲ್ಲಿ ಗ್ರಾಪಂ, ಉಪತಹಸೀಲ್ದಾರ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ ರೈತ ಸಂಪರ್ಕ ಕೇಂದ್ರ ಮತ್ತಿತರ ಹೋಬಳಿಮಟ್ಟದ ಕಚೇರಿಗಳಿವೆ. ಲಕ್ಕೋಜನಹಳ್ಳಿ, ಕಾಡನಕುಪ್ಪೆ, ವಿಭೂತಿಕೆರೆ, ಅಂಜನಾಪುರ, ಬನ್ನಿಕುಪ್ಪೆ, ದೇವರದೊಡ್ಡಿ, ಕವಣಾಪುರ, ಹೊಸೂರುದೊಡ್ಡಿ, ತಿಮ್ಮಯ್ಯನದೊಡ್ಡಿ, ಚಿಕ್ಕೇನಹಳ್ಳಿ, ನಂಜಾಪುರ, ಹೊಸದೊಡ್ಡಿ ಗ್ರಾಮಗಳ ಸಾವಿರಾರು ಜನರು ಇದೇ ರಸ್ತೆಯಲ್ಲಿ ನಿತ್ಯ ಓಡಾಟ ನಡೆಸುತ್ತಾರೆ. ಒಂದು ವೇಳೆ ಅನಾಹುತವಾದರೆ ಹೊಣೆ ಯಾರು ಎಂಬ ಪ್ರಶ್ನೆ ಎದುರಾಗಿದೆ.
ಕೆರೆಯನ್ನು ಹೂಳೆತ್ತಿ ಅಭಿವೃದ್ಧಿಪಡಿಸಿರುವ ಕಾರಣ ಸುಮಾರು 20 ರಿಂದ 25 ಅಡಿ ಆಳವಾಗಿದೆ. ಯಾವುದೇ ವಾಹನ ಬಿದ್ದರೂ ಪ್ರಾಣಾಪಾಯ ಸಂಭವವೇ ಹೆಚ್ಚಾಗಿದೆ. ರಸ್ತೆ ತಿರುವು ಇರುವುದರಿಂದ ಹಾಗೂ ತಡೆಗೋಡೆ ಇಲ್ಲದಿರುವುದರಿಂದ ವಾಹನಗಳ ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಸಂಬAಧಪಟ್ಟ ಇಲಾಖೆಗಳು ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಯ ಕೆರೆ ಏರಿಗೆ ತಡೆಗೋಡೆ ನಿರ್ಮಿಸಿ ಮುನ್ನೆಚ್ಚರಿಕೆಯಾಗಿ ಸೂಚನಾ ಫಲಕ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆರೆ ಏರಿಯ ಮೇಲಿನ ರಸ್ತೆಯಲ್ಲಿ ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ. ಎರಡೂ ಕಡೆ ತಡೆಗೋಡೆ ನಿರ್ಮಿಸುವ ಸಂಬಂಧ ಈ ಹಿಂದೆ ಇಲಾಖೆಗಳಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೆ, ಇಲಾಖೆ ಅಧಿಕಾರಿಗಳು ತಡೆಗೋಡೆ ನಡೆಸುವ ಸಂಬಂಧ ಮುತುವರ್ಜಿ ತೋರಿಲ್ಲ. ಸಾರ್ವಜನಿಕರು, ವಾಹನ ಸವಾರರ ಹಿತದೃಷ್ಟಿಯಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
| ಪಿ. ಅಶ್ವತ್ಥ್, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರು, ಅಂಕನಹಳ್ಳಿ.
ಗ್ರಾಪಂನಿಂದ ಪತ್ರ ಬರೆದು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗುತ್ತದೆ. ಜತೆಗೆ ಶಾಸಕ ಇಕ್ಬಾಲ್ ಹುಸೇನ್ ಅವರ ಗಮನಕ್ಕೂ ತಂದು ತಡೆಗೋಡೆಗೆ ಅನುದಾನ ಕೋರಲಾಗುವುದು.
| ಟಿ. ಸ್ವಾಮಿ
ಗ್ರಾಪಂ ಉಪಾಧ್ಯಕ್ಷರು, ಕೈಲಾಂಚ