

ಗಂಗಾಧರ್ ಭೈರಾಪಟ್ಟಣ
ರಾಮನಗರ: ಕರೊನಾ ಆತಂಕದ ನಡುವೆಯೇ ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ನಿರ್ವಣಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಶೇ.14 ಮಳೆಯಾಗಿದೆ. ಹೆಚ್ಚುವರಿ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೆರೆ-ಕಟ್ಟೆಗಳು ಮತ್ತು ಜಲಾಶಯಗಳು ತುಂಬಿದ್ದು ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಜಿಲ್ಲೆಯಲ್ಲಿ ಸೆ.ಅಂತ್ಯದವರೆಗೆ ವಾಡಿಕೆಯಂತೆ 430 ಮಿ.ಮೀಟರ್ ಮಳೆ ಬದಲಿಗೆ 433 ಮಿ.ಮೀಟರ್ ಮಳೆ ಬಿದ್ದಿತ್ತು. ಆದರೆ, ಈ ಬಾರಿ ಜನವರಿಯಿಂದ ಸೆ.ಅಂತ್ಯದ ವೇಳೆಗೆ ವಾಡಿಕೆ 614 ಮಿ.ಮೀಟರ್ ಮಳೆ ಬದಲಿಗೆ 723 ಮಿ.ಮೀಟರ್ ಮಳೆಯಾಗಿದೆ. ಕಳೆದ 15 ದಿನಗಳಿಂದ ಈಚೆಗೆ ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ.
ರಸಗೊಬ್ಬರ ಕೊರತೆ
ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಹೆಚ್ಚಿನ ಇಳುವರಿ ನಿರೀಕ್ಷಿಸಿದ್ದ ರೈತರಿಗೆ ರಸಗೊಬ್ಬರದ ಕೊರತೆ ಮತ್ತಷ್ಟು ಚಿಂತೆಗೀಡು ಮಾಡುವಂತೆ ಮಾಡಿದೆ. ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರದ ಪೂರೈಕೆ ಮಾಡುವಲ್ಲಿ ಕೃಷಿ ಇಲಾಖೆಯೂ ಸಹ ಹಿಂದೆ ಬಿದ್ದಿದೆ. ಜಿಲ್ಲೆಗೆ ತನ್ನದೇ ಆದ ದಾಸ್ತಾನು ಕೇಂದ್ರವಿಲ್ಲ. ಇದರಿಂದಾಗಿ ಹೆಚ್ಚುವರಿ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲು, ಮಂಡ್ಯ ಇಲ್ಲವೇ ನೆಲಮಂಗಲ ಬಳಿಯ ದಾಸ್ತಾನು ಕೇಂದ್ರಗಳನ್ನೇ ಅವಲಂಬಿಸಬೇಕಿದೆ. ಇದರಿಂದಾಗಿ ಜಿಲ್ಲೆಗೆ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಲಾಕ್ಡೌನ್ ಸಮಯದಲ್ಲಿ ರಸಗೊಬ್ಬರದ ಕಾರ್ಖಾನೆಗಳು ಬಾಗಿಲು ಹಾಕಿದ್ದ ಕಾರಣ, ಪೂರೈಕೆಯಲ್ಲಿ ವ್ಯತ್ಯಾಯ ಉಂಟಾಗಿದೆ ಎನ್ನುವುದು ಅಧಿಕಾರಿಗಳು ನೀಡುವ ಕಾರಣ.
ಎಲ್ಲೆಲ್ಲಿ ಎಷ್ಟೆಷ್ಟು ?
ಒಂದು ತಿಂಗಳ ಅಂತರದಲ್ಲಿ ಶೆ.18 ಹೆಚ್ಚು ಮಳೆಯಯಾಗಿದ್ದು, ಚನ್ನಪಟ್ಟಣದಲ್ಲಿ ಶೇ.7, ಕನಕಪುರದಲ್ಲಿ ಶೇ.38, ಮಾಗಡಿಯಲ್ಲಿ ಶೇ-2, ಹಾಗೂ ರಾಮನಗರ ತಾಲೂಕಿನಲ್ಲಿ ಶೇ.15ಕ್ಕೂ ಹೆಚ್ಚು ಮಳೆಯಾಗಿದೆ.
ಬಿತ್ತನೆ ಪ್ರಮಾಣ ಹೆಚ್ಚಳ
ಉತ್ತಮ ಮಳೆಯಾಗುತ್ತಿರುವುದು ಹಾಗೂ ಕೆರೆ-ಕಟ್ಟೆಗಳ ಭರ್ತಿಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಕಳೆದ ಭಾರಿಗಿಂತ ಈ ವರ್ಷ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2019-20ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 90771 ಹೆಕ್ಟರ್ನಲ್ಲಿ ಬಿತ್ತನೆ ನಡೆಸಿದ್ದು, ಆ ಮೂಲಕ ಶೇ.80 ಗುರಿ ದಾಖಲು ಮಾಡಿದೆ. ಇದಕ್ಕೆ ಹೋಲಿಕೆ ಮಾಡಿದರೆ, ಈ ಭಾರಿ ಗಣನೀಯ ಪ್ರಮಾಣದಲ್ಲಿ ಬಿತ್ತನೆ ಏರುಮುಖ ಕಂಡಿದೆ. ಅದರಲ್ಲೂ 91187 ಹೆಕ್ಟೇರ್ನಲ್ಲಿ ಬಿತ್ತನೆ ನಡೆದಿದ್ದು, ಶೇ.95.38 ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ನಡೆದಿದ್ದು, ಇದಕ್ಕೆ ಮಳೆ ಉತ್ತಮವಾಗಿ ಆಗಿರುವುದೇ ಕಾರಣ. ಲಾಕ್ಡೌನ್ನಿಂದಾಗಿ ಯುವ ಸಮುದಾಯ ಹಳ್ಳಿಗಳತ್ತ ಮರಳಿದ್ದು, ಕೃಷಿಯಲ್ಲಿ ಚೇತರಿಕೆಗೆ ಕಾರಣವಾಗಿದೆ. | ಸುಂದರ್ ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ