ಸೀಳು ತುಟಿ, ಸೀಳು ಅಂಗುಲ ತಪಾಸಣಾ ಶಿಬಿರ

siluthuti
Published on

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಇಂಗಾ ಹೆಲ್ತ್ ಪೌಂಡೇಶನ್ ಇವರ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದಡಿ ಇಂಗಾ ಹೆಲ್ತ್ ಪೌಂಡೇಶನ್ ವತಿಯಿಂದ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೀಳು ತುಟಿ, ಸೀಳು ಅಂಗುಲ ಮತ್ತು ಕ್ರೋನಿಯೋಫೇಷಿಯಲ್ ವಿರೂಪಗಳ ತಪಾಸಣಾ ಶಿಬಿರ ನಡೆಯಿತು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಕೆ.ಎಂ.ಸತೀಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಇಂಗಾ ಹೆಲ್ತ್ ಪೌಂಡೇಶನ್, ಇವರೊಂದಿಗೆ ಸೀಳು ತುಟಿ, ಸೀಳು ಅಂಗುಲ ಮತ್ತು ಕ್ರೋನಿಯೋಫೇಷಿಯಲ್ ವಿರೂಪಗಳ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆಗೆ ಜಿಲ್ಲೆಯನ್ನು ರಾಜ್ಯ ಮಟ್ಟದಿಂದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಶಿಬಿರದಲ್ಲಿ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಗುವ ಮಕ್ಕಳಿಗೆ ಇಂಗಾ ಹೆಲ್ತ್ ಪೌಂಡೇಶನ್, ಬೆಂಗಳೂರು, ಇವರಿಂದ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.


ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಮಧುಸೂಧನ್ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿಗಳಲ್ಲಿ ಆರ್‌ಬಿಎಸ್‌ಕೆ ತಂಡದ ವತಿಯಿಂದ ಆರೋಗ್ಯ ತಪಾಸಣೆ ನಡೆಸುತ್ತಿದೆ. ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಗುರುತಿಸಲಾಗಿರುವ ಸೀಳು ತುಟಿ, ಸೀಳು ಅಂಗುಲ ಮತ್ತು ಕ್ರೋನಿಯೋಫೇಷಿಯಲ್ ವಿರೂಪ ಇರುವ ಮಕ್ಕಳಿಗೆ ಇಂಗಾ ಹೆಲ್ತ್ ಪೌಂಡೇಶನ್ ವತಿಯಿಂದ ಈ ಶಿಬಿರದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.


ಸಾರ್ವಜನಿಕರು ತಮ್ಮ ಮಕ್ಕಳು ಈ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಅಂಗನವಾಡಿ/ ಶಾಲೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಆರ್‌ಬಿಎಸ್‌ಕೆ ವೈದ್ಯರಿಗೆ ಮಾಹಿತಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳುವುದರ ಮೂಲಕ ಶಿಬಿರದಲ್ಲಿ ಭಾಗವಹಿಸಿ ಉಚಿತ ಶಸ್ತ್ರ ಚಿಕಿತ್ಸೆಯ ಸದುಪಯೋಗ ಪಡೆದುಕೊಳ್ಳಬಹುದು. ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಡಿ.ಇ.ಐ.ಸಿ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದಾಗಿದೆ ಎಂದರು.


ಶಿಬಿರದಲ್ಲಿ ಸೀಳು ತುಟಿ-೨, ಸೀಳು ಅಂಗುಳ- ೫, ಸೀಳು ತುಟಿ ಮತ್ತು ಸೀಳು ಅಂಗುಳ- ೪, ಕ್ರೋನಿಯೋಫೇಷಿಯಲ್ ವಿರೂಪ- ೩, ಒಟ್ಟು ೧೪ ಫಲಾನುಭವಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ೪ ಫಲಾನುಭವಿಗಳನ್ನು ಶಸ್ತ್ರ ಚಿಕಿತ್ಸೆಗೆ ರೆಫರ್ ಮಾಡಲಾಗಿದ್ದು, ೩ ಮಕ್ಕಳನ್ನು ೮ ವಯಸ್ಸಿನ ನಂತರ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹಾಗೂ ೭ ಮಕ್ಕಳಿಗೆ ಈ ಹಿಂದೆ ಶಸ್ತ್ರ ಚಿಕಿತ್ಸೆ ಆಗಿದ್ದು, ಫಾಲೋ-ಅಪ್ ಮಾಡಲಾಗಿರುತ್ತದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಕ್ರೋನಿಯೋಫೇಷಿಯಲ್ ಸರ್ಜನ್ ಡಾ.ಲೋಹಿತ್, ಆರ್‌ಬಿಎಸ್‌ಕೆ ತಂಡದ ವೈದ್ಯರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net