

ಸದೇಶ್ ಕಾರ್ಮಾಡ್ ಮೈಸೂರು
ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದ ಬಡಾವಣೆಗಳಲ್ಲಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದವರಿಗೆ ಸರ್ಕಾರ ಹೊರಡಿಸಿದ ಆದೇಶದಿಂದ ಎದುರಾಗಿದ್ದ ತೊಡಕು ಕೊನೆಗೂ ನಿವಾರಣೆಯಾಗಿದ್ದು, ಇದರಿಂದ ರಾಜ್ಯದ ಲಕ್ಷಾಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜನರು ಎದುರಿಸುತ್ತಿರುವ ಸಮಸ್ಯೆಯ ಕುರಿತು ‘ವಿಜಯವಾಣಿ’ ದೈನಿಕ ಜನವರಿ 20ರ ಸಂಚಿಕೆಯಲ್ಲಿ ‘ಮನೆ ನಿರ್ಮಿಸಲು ನಕ್ಷೆ ಅನುಮೋದನೆಗೆ ತಡೆ’ ವರದಿಯ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಆದೇಶ ಹೊರಡಿಸಿದ ನಂತರ ಎದುರಾದ ಸಮಸ್ಯೆಯನ್ನು ಅರಿತ ಸರ್ಕಾರ ಇದೀಗ ಆದೇಶ ಹಿಂಪಡೆಯುವ ಮೂಲಕ ಜನರಿಗೆ ಮನೆ ನಿರ್ಮಿಸುವ ಹಾದಿಯನ್ನು ಸುಗಮಗೊಳಿಸಿಕೊಟ್ಟಿದೆ.
ಏನಿದು ಆದೇಶ?:
ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದ ಬಡಾವಣೆಗಳಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಟ್ಟಡ ನಕ್ಷೆ ಅನುಮೋದನೆ ನೀಡಲು ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಏಕಗಾವಕ್ಷಿ ವ್ಯವಸ್ಥೆ ಇತ್ತು. ಆದರೆ, 40 * 60 ವರೆಗಿನ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನಾ ಪ್ರಾಧಿಕಾರದಿಂದ ತಾಂತ್ರಿಕ ಅಭಿಪ್ರಾಯ ಪಡೆಯುವುದರಿಂದ ರಾಜ್ಯ ಸರ್ಕಾರ ವಿನಾಯಿತಿ ನೀಡಿ 24-11-2023 ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದರು.
ಈ ಆದೇಶ ಹೊರಬಿದ್ದ ನಂತರ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಕಟ್ಟಡ ನಕ್ಷೆ ಅನುಮೋದನೆ ನೀಡುವ ವ್ಯವಸ್ಥೆ ಸ್ಥಗಿತಗೊಂಡಿತು. ಹೀಗಾಗಿ ಮನೆ ನಿರ್ಮಾಣ ಮಾಡಲು ಬಯಸುವವರಿಗೆ ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯುವ ವ್ಯವಸ್ಥೆ ಬಂದ್ ಆಯಿತು. ಮೈಸೂರು ನಗರವೊಂದರಲ್ಲೇ 2 ಲಕ್ಷಕ್ಕೂ ಹೆಚ್ಚು ಜನರು ಈ ಸಮಸ್ಯೆಗೆ ಸಿಲುಕಿದರು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಕ್ಷೆ ಅನುಮೋದನೆ ನೀಡುವುದನ್ನು ಸ್ಥಗಿತಗೊಳಿಸಿದರೆ, ಮತ್ತೊಂದೆಡೆ ನಗರ ಸ್ಥಳೀಯ ಸಂಸ್ಥೆಗಳು ಬಡಾವಣೆ ನಮಗೆ ಹಸ್ತಾಂತರವಾಗಿಲ್ಲ ಎಂಬ ಕಾರಣಕ್ಕೆ ನಕ್ಷೆ ಅನುಮೋದನೆ ನೀಡುತ್ತಿರಲಿಲ್ಲ. ಹಾಗಾದರೆ ನಕ್ಷೆ ಅನುಮೋದನೆ ಯಾರಿಂದ ಪಡೆಯಬೇಕು ಎಂಬ ಪ್ರಶ್ನೆಗೆ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಬಳಿ ಉತ್ತರ ಇರಲಿಲ್ಲ.
ಈ ಸಮಸ್ಯೆ ಕುರಿತು ‘ವಿಜಯವಾಣಿ’ ಸರ್ಕಾರದ ಗಮನ ಸೆಳೆದ ನಂತರ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಅವರು 24-11-2023 ರಂದು ಹೊರಡಿಸಿದ್ದ ಆದೇಶವನ್ನು 5-2-2024 ರಂದು ಹಿಂಪಡೆದು ಹೊಸ ಆದೇಶ ಹೊರಡಿಸಿದ್ದಾರೆ. ಆದೇಶ ಹಿಂಪಡೆದ ನಂತರ ಇದೀಗ ಹಳೆಯ ವ್ಯವಸ್ಥೆಯಂತೆ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ನಕ್ಷೆ ಅನುಮೋದನೆ ಪಡೆಯಲು ಅವಕಾಶ ದೊರೆತ್ತಿದೆ.
ಸಮಸ್ಯೆ ಏನಾಗಿತ್ತು?: ನಗರದಲ್ಲಿ ನಿವೇಶನ ಖರೀದಿಸಲು ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ವಿನಿ ಯೋಗಿಸಿರುತ್ತಾರೆ. ಹೀಗಾಗಿ ಮನೆ ನಿರ್ಮಾಣಕ್ಕೆ ಬಹುಪಾಲು ಜನರು ಬ್ಯಾಂಕ್ ಸಾಲವನ್ನು ಅವಲಂಬಿಸುತ್ತಾರೆ. ಆದರೆ, ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯದೆ ಇದ್ದರೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರೆಯುವುದಿಲ್ಲ. ಮನೆ ನಿರ್ಮಾಣವನ್ನು ಮುಂದೂಡುತ್ತಾ ಹೋದಷ್ಟು ನಿರ್ಮಾಣ ವೆಚ್ಚವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ. ಹೀಗಾಗಿ ಜನರು ಆದಷ್ಟು ಬೇಗ ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ನಡುವೆ ಕಳೆದ 4 ತಿಂಗಳಿನಿಂದ ಅಲೆದಾಡುತ್ತಿದ್ದರು. ಇದೀಗ ಈ ಅಲೆದಾಟಕ್ಕೆ ತೆರೆ ಬಿದ್ದಿದೆ.
ಸರ್ಕಾರದ ನಿರ್ದೇಶನ ಪ್ರಕಾರ 4,000 ಚದರ ಅಡಿವರೆಗೆ ವಿಸ್ತೀರ್ಣ ಹೊಂದಿರುವ ನಿವೇಶನಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಯೋಜನಾ ಪ್ರಾಧಿಕಾರದಿಂದ ತಾಂತ್ರಿಕ ಅಭಿಪ್ರಾಯ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿತ್ತು. ಆದರೆ, ಆದೇಶದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಆದೇಶವನ್ನು ಹಿಂಪಡೆಯಲಾಗಿದೆ.
ಕೆ. ಲತಾ, ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ