ಚಿಕ್ಕಬೆಟ್ಟದ ಏಸು ಪ್ರತಿಮೆ ತೆರವು

Yesu
Published on

ವಿಜಯಪುರ: ಜಿಲ್ಲಾಡಳಿತದ ಆದೇಶದಂತೆ ದೊಡ್ಡಸಾಗರಹಳ್ಳಿಯ ಚಿಕ್ಕಬೆಟ್ಟದಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಏಸು ಪ್ರತಿಮೆ, ಶಿಲುಬೆ ಹಾಗೂ ‘ಮಹಿಮಾಬೆಟ್ಟಕ್ಕೆ ದಾರಿ’ ಎಂದಿದ್ದ ನಾಮಫಲಕವನ್ನು ಪೊಲೀಸ್ ಬಂದೋಬಸ್ತ್​ನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದ್ದಾರೆ.

ಇತ್ತೀಚೆಗೆ ದೊಡ್ಡ ಸಾಗರಹಳ್ಳಿಯ ಚಿಕ್ಕಬೆಟ್ಟದ ಮೇಲೆ ಯೇಸು ಪ್ರತಿಮೆ ಹಾಗೂ ಶಿಲುಬೆಗಳು ಸ್ಥಾಪನೆಯಾಗಿದ್ದವು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭಜರಂಗದಳ, ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ವಾರದ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ತೆರವಿಗೆ ಕೋರಿದ್ದರು. ಸರ್ವೆ ನಂ. 158ರಲ್ಲಿ 4 ಎಕರೆ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾಗಿದ್ದು, ಇದನ್ನು ಲಕ್ಷ್ಮೀ ನರಸಿಂಹಸ್ವಾಮಿಬೆಟ್ಟ (ಚಿಕ್ಕಬೆಟ್ಟ) ಎಂದು ಕರೆಯಲಾಗುತ್ತಿದೆ. ಬೆಟ್ಟದ ಮೇಲಿನ ವಿನಾಯಕ ಹಾಗೂ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಗಳನ್ನು ನಾಶಗೊಳಿಸಿ, ಬೆಟ್ಟವನ್ನು ಸ್ವಾಧೀನಕ್ಕೆ ಪಡೆದು ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಹಿಂದುಗಳ ಜಾಗ ಅತಿಕ್ರಮಿಸಿ, ಕ್ರೖೆಸ್ತ ಮಿಷನರಿಗಳು ಪ್ರತಿಮೆ ಹಾಗೂ ಶಿಲುಬೆಯನ್ನಿಟ್ಟು, ಧಾರ್ವಿುಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದರು.

ತನಿಖೆಗೆ ಆಗ್ರಹ

ಮಹಿಮಾ ಬೆಟ್ಟದಲ್ಲಿದ್ದ ಏಸು ಪ್ರತಿಮೆ ತೆರವು ಮಾಡಿದ ಕ್ರಮವನ್ನು ಬೆಂಗಳೂರು ಮಹಾ ಧರ್ಮಕ್ಷೇತ್ರ ವಿರೋಧಿಸಿದೆ. ಬೆಟ್ಟದ 4.5 ಎಕರೆ ಪ್ರದೇಶವನ್ನು ಕ್ರೖೆಸ್ತರ ಅಂತ್ಯಕ್ರಿಯೆಗಾಗಿ ಸರ್ಕಾರ ಮಂಜೂರು ಮಾಡಿದೆ. ಅಲ್ಲಿ 12 ಅಡಿ ಎತ್ತರದ ಏಸು ಪ್ರತಿಮೆ ಸ್ಥಾಪಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಇಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಕೆಲ ವ್ಯಕ್ತಿಗಳು ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಮೂಡಿಸುತ್ತಿದ್ದಾರೆ. ಅವರ ಒತ್ತಡಕ್ಕೆ ಮಣಿದು ಪೊಲೀಸರು ಏಸು ಪ್ರತಿಮೆ ಯನ್ನು ಒತ್ತಾಯಪೂರ್ವಕವಾಗಿ ತೆರವುಗೊಳಿಸಿದ್ದಾರೆ. ಇದರಿಂದಾಗಿ ನಮ್ಮ ಧಾರ್ವಿುಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಂತಾಗಿದೆ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಬೆಂಗಳೂರು ಮಹಾ ಧರ್ಮಕ್ಷೇತ್ರದ ಆರ್ಚ್ ಬಿಷಪ್ ರೆ. ಡಾ. ಪೀಟರ್ ಮಚಾಡೋ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net