

ಹೊಳೆನರಸೀಪುರ: ಹೊನ್ನಾವರ ಗ್ರಾಮದ ಕೆರೆ ಒತ್ತುವರಿಯನ್ನು ಬುಧವಾರ ತೆರವುಗೊಳಿಸಲಾಯಿತು.
ತಾಲೂಕಿನ ಕಸಬಾ ಹೋಬಳಿಯ ಐಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ ಕೆರೆ, ನೀರಿನ ಮಿತಬಳಕೆ ಮತ್ತು ಅಂತರ್ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಗ್ರಾ.ಪಂ. ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವುಗೊಳಿಸಲಾಗುತ್ತದೆ. ಮಾರ್ಚ್ 6ರಂದು ಚಿಕ್ಕಚಾಗಳ್ಳಿ ಗ್ರಾಮದ ನೂರು ಎಕರೆ ಕೆರೆಯಲ್ಲಿ 50 ಎಕರೆಯನ್ನು ಒತ್ತುವರಿ ಮಾಡಲಾಗಿತ್ತು. ಹೊನ್ನಾವರ ಗ್ರಾಮದಲ್ಲಿ 2.10 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಒತ್ತುವರಿಯನ್ನು ತೆರವುಗೊಳಿಸಿ, ಹದ್ದುಬಸ್ತು ಮಾಡಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಒತ್ತುವರಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ. ಕಂದಾಯ ಇಲಾಖೆ ಪ್ರಕರಣ ದಾಖಲಿಸುತ್ತದೆ ಎಂಬುದಾಗಿ ಒತ್ತುವರಿದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಸರ್ವೇಯರ್ ಗಿರೀಶ್, ರಾಜಸ್ವ ನಿರೀಕ್ಷಕ ಎ.ಟಿ.ಸತೀಶ್, ಪಿಡಿಒ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ವಿಶ್ವಪ್ರಸಾದ್ ಇತರರಿದ್ದರು.