

ಬೆಂಗಳೂರು: ಉತ್ತರಹಳ್ಳಿ ಹೋಬಳಿಯ ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂ.90ರಲ್ಲಿರುವ ಚಾಮುಂಡಿ ಸ್ಲಂ ಜಾಗದ ಬೃಹತ್ ಮಳೆ ನೀರುಗಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳನ್ನು ಪಾಲಿಕೆ ತೆರವುಗೊಳಿಸಿದೆ.
ಬಿಬಿಎಂಪಿ ದಕ್ಷಿಣ ವಲಯಕ್ಕೆ ಸೇರಿರುವ ಚಾಮುಂಡಿ ಕೊಳೆಗೇರಿ ಬದಿ ಬೃಹತ್ ರಾಜಕಾಲುವೆ ಹಾದುಹೋಗಿದೆ. ಇದರ ಬದಿ ಹಾಗೂ ರಾಜಕಾಲುವೆ ಮೇಲೆ ಕೆಲವರು ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ಇಲ್ಲಿನ ರಾಜಕಾಲುವೆಯನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಲ್ಲಿದ್ದ ಅನಧಿಕೃತ ಭಾಗ ಹಾಗೂ ಇತರ ವಸ್ತುಗಳನ್ನು ಹೊರ ಸಾಗಿಸಿ ಸ್ಥಳವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ರಾಜಕಾಲುವೆಗಳ ಪುನಶ್ಚೇತನ ಮಾಡುವಂತೆ ಸರ್ಕಾರ ಸೂಚಿಸಿದ್ದು, ಅದರಂತೆ ಹೊಸಕೆರೆಹಳ್ಳಿ ಲೇಕ್ ಬಳಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ಪಾಲಿಕೆಯ ಮಳೆ ನೀರುಗಾಲುವೆ ವಿಭಾಗದ ಅಭಿಯಂತರರು ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.