ಚುನಾವಣಾ ನೀತಿ ಸಂಹಿತೆ ತೆರವು, ಆಡಳಿತ ಯಂತ್ರಾಂಗದ ಚುರುಕಿನ ನಿರೀಕ್ಷೆ

16CBP3a
Published on

ಚಿಕ್ಕಬಳ್ಳಾಪುರ: ಫಲಿತಾಂಶಗಳ ಘೋಷಣೆಗಳೊಂದಿಗೆ ಚುನಾವಣಾ ನೀತಿ ಸಂಹಿತೆ ಮುಗಿದಿದೆ. ಇದೀಗ ಆಡಳಿತ ಯಂತ್ರಾಂಗಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮತ್ತಷ್ಟು ಚುರುಕು ನೀಡಿ, ಜನಪರ ಅಭಿವೃದ್ಧಿ ಕೆಲಸಗಳಿಗೆ ವೇಗ ಹೆಚ್ಚಿಸಬೇಕಾಗಿದೆ.
ಹೌದು! ಲೋಕಸಭಾ, ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದ ಸಚಿವರು, ಶಾಸಕರು ಮತ್ತು ಇತರ ಜನಪ್ರತಿನಿಧಿಗಳಿಗೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಕಡೆಗೆ ಗಮನಕೊಡಲಾಗಲಿಲ್ಲ. ಇದಕ್ಕೆ ನೀತಿ ಸಂಹಿತೆ ಅಡ್ಡಿಯಾಗಿತ್ತು. ಇದು ಇದೀಗ ತೆರವುಗೊಂಡಿದೆ. ಇದರಿಂದ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕೆಲಸಗಳು, ಜನರ ಸಮಸ್ಯೆಗಳ ತ್ವರಿತ ಪರಿಹಾರ, ಸರ್ಕಾರದ ಸವಲತ್ತುಗಳನ್ನು ಅರ್ಹರಿಗೆ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

*ಸುದೀರ್ಘ ನೀತಿ ಸಂಹಿತೆ
ಮಾ.16 ರಂದು ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಮಾ.28 ರಂದು ಅಧಿಸೂಚನೆ ಹೊರಡಿಸಿದ್ದು ಏ.26 ರಂದು ಮತದಾನ ಪ್ರಕ್ರಿಯೆ ನಡೆಯಿತು. ಇದು ಮುಗಿಯುತ್ತಿದ್ದಂತೆ ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿದ್ದು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಮುಂದುವರೆಸಲಾಯಿತು. ಇದರ ನಡುವೆ ಜೂ.4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಮತ್ತು ಜೂ.6 ರಂದು ವಿಧಾನಪರಿಷತ್ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದೆ. ಚುನಾವಣಾ ಜ್ವರ ದೂರವಾಗಿದೆ.

*ಚುನಾವಣಾ ಹೆಚ್ಚಿನ ಒತ್ತಡ
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾ.16 ರಿಂದಲೂ ಇಲ್ಲಿಯವರೆಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ನೇತೃತ್ವದಲ್ಲಿ ಯಾವುದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲು ಸಾಧ್ಯವಾಗಿಲ್ಲ. ಬಹುತೇಕ ಅಧಿಕಾರಿಗಳು ನಿಯಮಗಳ ಪಾಲನೆಯ ಮೇಲೆ ನಿಗಾ, ಮತದಾರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳ ಸಜ್ಜು, ಫಲಿತಾಂಶ ಘೋಷಣೆ ಸೇರಿದಂತೆ ಚುನಾವಣಾ ಜವಾಬ್ದಾರಿಗಳ ನಿರ್ವಹಣೆ ಕಡೆಗೆ ಹೆಚ್ಚಿನ ಗಮನಹರಿಸಿದ್ದರು. ಇದರ ಒತ್ತಡದಲ್ಲಿ ಮೂನಾಲ್ಕು ತಿಂಗಳಿಂದಲೂ ತುರ್ತು ಸಮಸ್ಯೆಗಳನ್ನು ಹೊರತುಪಡಿಸಿದಂತೆ ಜನಪರ ಅಭಿವೃದ್ಧಿ ಕೆಲಸಗಳನ್ನು ಮುಂದೂಡಿಕೊಂಡು ಬರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net