

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿಯ ಕುಕ್ಕನಹಳ್ಳಿಯ ಕೃಷಿ ಭೂಮಿಯಲ್ಲಿ ನಿರ್ಮಿಸಿದ್ದ ಅನಧಿಕೃತ ವಸತಿ ಬಡಾವಣೆಯನ್ನು ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳು ತೆರವುಗೊಳಿಸಿದರು.
ಗ್ರಾಮದ ಸುಮಾರು 7 ಸರ್ವೇ ನಂಬರ್‌ಗಳಲ್ಲಿರುವ ಒಟ್ಟು 16.22 ಎಕರೆ ಕೃಷಿ ಭೂಮಿಯಲ್ಲಿ ವಸತಿ ಬಡಾವಣೆ ನಿರ್ಮಿಸಿ ನಿವೇಶನಗಳ ಮಾರಾಟಕ್ಕೆ ಖಾಸಗಿ ಸಂಸ್ತೆ ಮುಂದಾಗಿತ್ತು. ಮಾಲೀಕರಿಗೆ ಬಡಾವಣೆ ತೆರವಿಗಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ತೆರವು ಮಾಡದ ಕಾರಣ ತಹಸೀಲ್ದಾರ್ ಶಿವರಾಜ್ ನೇತೃತ್ವದ ಅಧಿಕಾರಿಗಳ ತಂಡ ವಸತಿ ಬಡಾವಣೆ ತೆರವುಗೊಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅವರ ನೀಡಿದ ನಿರ್ದೇಶನದಂತೆ ಗ್ರಾಮದ ಅನಧಿಕೃತ ವಸತಿ ಬಡಾವಣೆಯನ್ನು ತೆರವುಗೊಳಿಸಲಾಗುತ್ತಿದೆ ಎಂದು ತಹಸೀಲ್ದಾರ್ ಶಿವರಾಜು ತಿಳಿಸಿದರು.
ತಾಲೂಕಿನಾದ್ಯಂತ ಸುಮಾರು 1.600 ಎಕರೆಗೂ ಮೀರಿದ ಕೃಷಿಭೂಮಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದೆ. ಮುಂಬರುವ ದಿನಗಳಲ್ಲಿ ಅನಧಿಕೃತ ವಸತಿ ಬಡಾವಣೆಗಳ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ಉಪ ತಹಸೀಲ್ದಾರ್ ಎನ್.ನಂದೀಶ್ ಮಾಹಿತಿ ನೀಡಿದರು.
ರಾಜಸ್ವ ನಿರೀಕ್ಷಕ ಎಸ್.ಮನೀಶ್, ವಿ.ರವಿನಂದನ್, ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜುನಾಥ್, ಪಿ.ಮಂಜು, ಎಂ.ಜಗದೀಶ್, ಟಿ.ವಿ.ರಮೇಶ್, ಬಿ.ರಾಜಶೇಖರ್, ಎಸ್.ಧನಂಜಯ್ ಮತ್ತಿತರರು ಉಪಸ್ಥಿತರಿದ್ದರು.