ಬಿಬಿಎಂಪಿ ಪೂರ್ವ ವಲಯದಲ್ಲಿ ಅನಧಿಕೃತ ಫುಟ್‌ಪಾತ್ ಒತ್ತುವರಿ ತೆರವು

footpath teravu
Published on

ಬೆಂಗಳೂರು: ಅನಧಿಕೃತವಾಗಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿರುವ ಬಿಬಿಎಂಪಿ, ಶುಕ್ರವಾರ ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿನ 6 ಮಕ್ಷೇತ್ರಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಒಎಫ್‌ಸಿ ಕೇಬಲ್​ ಗಳ ತೆರವುಗೊಳಿಸಿತು.

ಪೂರ್ವ ವಲಯದ ಶಾಂತಿನಗರ, ಶಿವಾಜಿನಗರ, ಸಿ.ವಿ.ರಾಮನ್‌ನಗರ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಹೆಬ್ಬಾಳ ವಿಧಾನಸಭೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು. ಈ ವೇಳೆ ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆಗಳ ಮೇಲ್ಚಾವಣಿ, ಅನುಪಯುಕ್ತ ತಳ್ಳುವ ಗಾಡಿಗಳನ್ನು ತೆರವು ಮಾಡಲಾಯಿತು. ಒಟ್ಟು 7.85 ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 104 ಅನುಪಯುಕ್ತ ತಳ್ಳುವ ಗಾಡಿ ಜಪ್ತಿ ಮಾಡಲಾಯಿತು. 36 ಪಾದಚಾರಿ ಮಾರ್ಗಕ್ಕೆ ಚಾಚಿಕೊಂಡ ಅಂಗಡಿ ಮುಂಗಟ್ಟುಗಳ ಮೇಲ್ಚಾವಣಿ, 52 ಅನಧಿಕೃತ ನಾಮಫಲಕಗಳು, 3700 ಮೀ. ಅನಧಿಕೃತ ಒಎಫ್​ಸಿ ಕೇಬಲ್‌ಗಳು ಹಾಗೂ 2 ಅನಧಿಕೃತ ಪೆಟ್ಟೆಗೆ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಜಪ್ತಿ ಮಾಡಿದರು.

ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ:

ಸಾರ್ವಜನಿಕರ ಸುರಕ್ಷತೆ ಮತ್ತು ವಾಹನ ಸವಾರರ ಸಂಚಾರಕ್ಕೆ ಯಾವುದೇ ತೊಂದರೆಯಾಗದಿರಲು ಪಾದಚಾರಿ ಮಾರ್ಗದಲ್ಲಿ ಒತ್ತುವರಿಯಾಗಿರುವ ಅಂಗಡಿ ಮಳಿಗೆ, ತಳ್ಳುವ ಗಾಡಿ ಹಾಗೂ ಅನಧಿಕೃತ ಒಎಫ್​​ಸಿ ಕೇಬಲ್ ತೆರವುಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net