

ಆಲ್ದೂರು: ಆಲ್ದೂರು ಸಮೀಪದ ತುಡಕೂರು ಗ್ರಾಮದ ಸಮೀಪ ಒತ್ತುವರಿಯಾಗಿದ್ದ ಜಾಗವನ್ನು ಅಧಿಕಾರಿಗಳು ತೆರವು ಮಾಡಿಸಿದರು.
ತುಡಕೂರು ಗ್ರಾಮದ ಕೆರೆ ಸುಮಾರು 1.75 ಎಕರೆ ಜಾಗವನ್ನು ಗ್ರಾಮದ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿದ್ದರು. ಒತ್ತುವರಿ ಜಾಗ ತೆರವು ಮಾಡುವಂತೆ ಒತ್ತುವರಿದಾರರಿಗೆ ಕಳೆದ ವರ್ಷವೇ ನೋಟಿಸ್ ನೀಡಲಾಗಿತ್ತು.
ತಹಸೀಲ್ದಾರ್ ಆದೇಶದಂತೆ ಶುಕ್ರವಾರ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಒತ್ತುವರಿ ಜಾಗವನ್ನು ತೆರವು ಮಾಡಿಸಿದರು. ಒತ್ತುವರಿ ಜಾಗದಲ್ಲಿ ಕಾಫಿ ಹಾಗೂ ಸ್ವಿಲರ್ ಮರಗಳನ್ನು ಬೆಳೆಯಲಾಗಿತ್ತು. ಅವುಗಳನ್ನು ತೆರವು ಮಾಡಿ ಜಾಗ ಗುರುತು ಮಾಡಿ ಗ್ರಾಪಂ ಸುಪರ್ದಿಗೆ ನೀಡಲಾಯಿತು.
ಆಲ್ದೂರು ಸುತ್ತಮುತ್ತ ಸಾಕಷ್ಟು ಕೆರೆಗಳು ಒತ್ತುವರಿಯಾಗಿದ್ದು , ಪ್ರತಿ ಶುಕ್ರವಾರ ತೆರವು ಕಾರ್ಯಾಚರಣೆ ನಡೆಯಲಿದೆ, ಚಿಕ್ಕಮಾಗರವಳ್ಳಿ ಗ್ರಾಮದ ಶಿಡಬಿನಕೆರೆ ಸರ್ವೇ ನಂ.89ರಲ್ಲಿ 4.18 ಎಕರೆ ಒತ್ತುವರಿಯಾಗಿದ್ದು, ಇಂದು 1.75 ಒತ್ತುವರಿ ಜಾಗ ತೆರವು ಮಾಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಂದಾಯ ಅಧಿಕಾರಿ ವೆಂಕಟೇಶ್, ಗ್ರಾಮ ಲೆಕ್ಕಾಧಿಕಾರಿ ಮಧುಸೂಧನ್, ಆಲ್ದೂರು ಪಿಡಿಒ ಶಂಶುನ್ ನಹರ್, ಸಿಬ್ಬಂದಿ ಮಂಜುನಾಥ್,ವಸಂತ್‌ಕುಮಾರ್, ಗ್ರಾಪಂ ಮಾಜಿ ಸದಸ್ಯ ಭದ್ರಯ್ಯ ಗ್ರಾಮಸ್ಥರು ಇದ್ದರು.