ಜೆಸಿಬಿಯಿಂದ ಎರಡು ಗೂಡಂಗಡಿ ತೆರವು

STALL
Published on

ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ಸಮೀಪದ ಅಂಬೇಡ್ಕರ್ ಸರ್ಕಲ್ ಬಳಿ ಎರಡು ಗೂಡಂಗಡಿಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಂಗಳವಾರ ಬೆಳಗಿನ ಜಾವ ತೆರವುಗೊಳಿಸಿದ್ದಾರೆ.

ಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರು, ಅದೇ ಸ್ಥಳದಲ್ಲಿ ಶೆಡ್ ಹಾಕಿ ನೆಲೆಯೂರುವ ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅಂಗಡಿ ತೆರವುಗೊಳಿಸಲಾಗಿದೆ. ಬೆಳಗಿನ ಜಾವ ಜೆಸಿಬಿ ಬಳಸಿ ಮುಖ್ಯಾಧಿಕಾರಿ ಸುನೀಲ ಗಾವಡೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುನೀಲ ಗಾವಡೆ, ತಳ್ಳುಗಾಡಿಯಲ್ಲಿ ಬೀದಿಬದಿಯಲ್ಲಿ ವ್ಯಾಪಾರ ನಡೆಸಲು ಅವಕಾಶವಿದೆ. ಅದಕ್ಕಾಗಿಯೇ ಪ.ಪಂ. ಗುರುತಿನ ಚೀಟಿಯನ್ನೂ ನೀಡಿದೆ. ಆದರೆ, ಅಂಬೇಡ್ಕರ್ ಸರ್ಕಲ್ ಪಕ್ಕ ಈ ಅಂಗಡಿಯವರು ಶೆಡ್ ನಿರ್ಮಿಸಿಕೊಂಡು ಅಲ್ಲೇ ಅಂಗಡಿ ವಿಸ್ತರಣೆಗೆ ಮುಂದಾಗಿದ್ದರು. ಹಿಂದಿನಂತೆ ತಳ್ಳುಗಾಡಿಯಲ್ಲಿ ವ್ಯಾಪಾರ ಮುಂದುವರಿಸಬೇಕು. ಶೆಡ್ ನಿರ್ಮಾಣ, ಅಂಗಡಿ ವಿಸ್ತರಣೆ ಕಾರ್ಯ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಅದನ್ನು ಅವರು ನಿಲ್ಲಿಸದೆ ಮುಂದುವರಿಸಿದ್ದರಿಂದ ತೆರವು ಕಾರ್ಯ ಅನಿವಾರ್ಯವಾಯಿತು ಎಂದರು.

ಪ.ಪಂ. ಕ್ರಮದ ವಿರುದ್ಧ ಆಕ್ರೋಶ: ಜೀವನ ನಿರ್ವಹಣೆಗಾಗಿ ಅಂಗಡಿ ನಡೆಸುತ್ತಿದ್ದ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರ ಅಂಗಡಿಗಳನ್ನು ತೆರವುಗೊಳಿಸಿದ ಪ.ಪಂ. ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ರವಿ ನಾಯ್ಕ ಖಂಡಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಅಂಗಡಿಗಳು ಪ.ಪಂ ಜಾಗದಲ್ಲಿ ಅನಧಿಕೃತವಾಗಿದ್ದು, ಆ ಅಂಗಡಿಗಳನ್ನು ತೆರವುಗೊಳಿಸದೆ ಕೇವಲ ದಲಿತ ಮತ್ತು ಅಲ್ಪಸಂಖ್ಯಾತರ ಅಂಗಡಿ ತೆರವುಗೊಳಿಸಿರುವುದು ಇಬ್ಬಗೆಯ ನೀತಿಯಾಗಿದೆ. ತೆರವುಗೊಳಿಸುವುದಾದರೆ ಪಟ್ಟಣ ವ್ಯಾಪ್ತಿಯ ಎಲ್ಲ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಎಲ್ಲರಿಗೂ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net