

ಪುತ್ತೂರು ಗ್ರಾಮಾಂತರ: ಬಲ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಪ್ತಿಯ ಕೊಪ್ಪಳ- ಹಸಂತಡ್ಕ ಸಾರ್ವಜನಿಕ ರಸ್ತೆ ಬದಿಯನ್ನು ಅತಿಕ್ರಮಿಸಿ ಖಾಸಗಿಯವರು ನಿರ್ಮಿಸಿದ್ದ ಬೇಲಿಯನ್ನು ಪುತ್ತೂರು ತಾಲೂಕು ಪಂಚಾಯಿತಿ ಮತ್ತು ಬಲ್ನಾಡು ಗ್ರಾ.ಪಂ. ಪೊಲೀಸರ ಸಹಕಾರದೊಂದಿಗೆ ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದೆ.
ಕೊಪ್ಪಳ- ಹಸಂತಡ್ಕ ರಸ್ತೆಯ ಒಂದು ಬದಿಗೆ ಅಲ್ಲಿನ ವ್ಯಕ್ತಿಯೊಬ್ಬರು ಮರದ ಕಂಬಗಳನ್ನು ಅಳವಡಿಸಿ ಬೇಲಿ ನಿರ್ಮಿಸಿ ರಸ್ತೆ ಅತಿಕ್ರಮಿಸಲು ಮುಂದಾಗಿರುವುದಾಗಿ ಅಲ್ಲಿನ ಸಾರ್ವಜನಿಕರು ಗ್ರಾ.ಪಂ.ಗೆ ದೂರು ಸಲ್ಲಿಸಿದ್ದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ. ವತಿಯಿಂದ ಬೇಲಿ ಹಾಕಿದ ವ್ಯಕ್ತಿಗೆ ನೋಟಿಸ್ ನೀಡಿ, ಬೇಲಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಬೇಲಿ ತೆರವುಗೊಳಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾ.ಪಂ.ನಿಂದ ತಾಲೂಕು ಪಂಚಾಯಿತಿಗೆ ಈ ಕುರಿತು ಮನವಿ ಸಲ್ಲಿಸಲಾಗಿತ್ತು.
ರಸ್ತೆಯನ್ನು ಅತಿಕ್ರಮಿಸಿ ಅಳವಡಿಸಲಾದ ಬೇಲಿ ತೆರವುಗೊಳಿಸುವ ಕಾರ್ಯಾಚರಣೆ ಶುಕ್ರವಾರ ತಾ.ಪಂ. ಸಹಾಯಕ ನಿರ್ದೇಶಕ ವಿಲ್ಫ್ರೆಡ್ ರೋಡ್ರಿಗಸ್ ನೇತೃತ್ವದಲ್ಲಿ ಸಂಪ್ಯ ಠಾಣಾ ಪೊಲೀಸರ ಸಹಕಾರದೊಂದಿಗೆ ಬಲ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ನಡೆದಿದೆ. ತಾ.ಪಂ.ನ ಭರತ್, ಬಲ್ನಾಡು ಗ್ರಾ.ಪಂ. ಅಧ್ಯಕ್ಷೆ ಪರಮೇಶ್ವರಿ ಬಿ.ಆರ್., ಉಪಾಧ್ಯಕ್ಷ ರವಿಚಂದ್ರ, ಸದಸ್ಯೆ ವಸಂತಿ, ಪಿಡಿಒ ದೇವಪ್ಪ ಪಿ.ಆರ್., ಕಾರ್ಯದರ್ಶಿ ಲಕ್ಷ್ಮೀ ಇದ್ದರು.
ಹಿಂದಿನಿಂದಲೇ ಇದ್ದ ವಿವಾದ
ಕೊಪ್ಪಳ- ಹಸಂತಡ್ಕ ಸಾರ್ವಜನಿಕ ರಸ್ತೆ ಬದಿಗೆ ಈ ಹಿಂದೆಯೂ ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಅಳವಡಿಸಿದ್ದರು. ಆ ವೇಳೆ ಮಾತುಕತೆ ಮೂಲಕ ವಿವಾದ ಇತ್ಯರ್ಥಗೊಳಿಸಿ, ಬೇಲಿ ತೆರವುಗೊಳಿಸಲಾಗಿತ್ತು. ಈ ಬಾರಿ ಹಿಂದಿಗಿಂತಲೂ ಎರಡು ಅಡಿ ಮುಂದಕ್ಕೆ ರಸ್ತೆಯನ್ನು ಅತಿಕ್ರಮಿಸಿ ಬೇಲಿ ಹಾಕಲು ಮುಂದಾಗಿದ್ದರು. ಅದನ್ನು ತೆರವುಗೊಳಿಸುವ ಕಾರ್ಯ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಮಾಹಿತಿ ನೀಡಿದ್ದಾರೆ.