

ಗುಂಡ್ಲುಪೇಟೆ: ಊಟಿಗೆ ತೆರಳುವ ಪ್ರವಾಸಿಗರನ್ನು ಕೈಬೀಸಿ ಬಂಡೀಪುರಕ್ಕೆ ಸ್ವಾಗತಿಸುತ್ತಿದ್ದ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್ ಬಳಿ ಅರಣ್ಯ ಇಲಾಖೆ ನಿರ್ಮಿಸಿದ್ದ ಸ್ವಾಗತ ಕಮಾನನ್ನು ಶುಕ್ರವಾರ ಕೆಡವಿ ಹಾಕಲಾಗಿದೆ.
2017ರಲ್ಲಿ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್ ಬಳಿ ಅರಣ್ಯ ಇಲಾಖೆ ನಿರ್ಮಿಸಿದ್ದ ಸ್ವಾಗತ ಕಮಾನಿನ ಮೇಲೆ ಹುಲಿ, ಚಿರತೆ ಮುಂತಾದ ವನ್ಯಜೀವಿಗಳ ಪ್ರತಿಕೃತಿಗಳನ್ನು ನಿರ್ಮಿಸಿದ್ದರಿಂದ ಬಂಡೀಪುರಕ್ಕೆ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಬಹುತೇಕ ಪ್ರವಾಸಿಗರು ಇದರ ಬಳಿ ನಿಂತು ಫೋಟೋ ತೆಗೆದುಕೊಳ್ಳುವ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಆದರೆ ದಿನೇ ದಿನೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕಿರಿದಾದ ಕಮಾನಿನ ಮೂಲಕ ಸಾಗುವುದು ವಾಹನ ಸವಾರರಿಗೆ ಪ್ರಯಾಸಕರವಾಗಿತ್ತು. ಚೆಕ್‌ಪೋಸ್ಟ್‌ನ ಗೇಟ್ ಅಳವಡಿಸಲು ನಿರ್ಮಿಸಿದ್ದ ಡುಬ್ಬವು ರಸ್ತೆಗಿಂತ ಎತ್ತರವಾಗಿದ್ದರಿಂದ ಚಿಕ್ಕ ಚಕ್ರದ ವಾಹನಗಳಿಗೆ ತುಂಬ ತೊಂದರೆಯಾಗುತ್ತಿತ್ತು. ಒಮ್ಮೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್, ಮತ್ತೊಮ್ಮೆ ರಕ್ಷಣಾ ಇಲಾಖೆಯ ಕಂಟೈನರ್‌ನಂತಹ ದೊಡ್ಡ ವಾಹನಗಳು ಸಿಲುಕಿಕೊಂಡು ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಕೊನೆಗೆ ಜೆಸಿಬಿ ಸಹಾಯದಿಂದ ಈ ವಾಹನಗಳನ್ನು ಹೊರತಂದು ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು.