ರಸ್ತೆ ಒತ್ತುವರಿ ತೆರವು

Road clearance
Published on

ಚಿಕ್ಕಮಗಳೂರು: ನಗರದ ಕೋಟೆ ಬಡಾವಣೆಯ ಮೂರುಮನೆಹಳ್ಳಿ ರಸ್ತೆಯಲ್ಲಿ ಸಾರ್ವಜನಿಕ ರಸ್ತೆಗೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ತಂತಿ ಬೇಲಿಯನ್ನು ನಗರಸಭೆ ಶುಕ್ರವಾರ ತೆರವುಗೊಳಿಸಿದೆ.

ನಗರದ ಕೋಟೆ ಬಡಾವಣೆಯ ಮೂರುಮನೆಹಳ್ಳಿ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ ಕಾಲು ದಾರಿಗೆ ರಂಗಪ್ಪ, ಸರೋಜಮ್ಮ, ಸುಶೀಲಾ, ವನಜಾಕ್ಷಿ ಎಂಬುವವರು ಬೇಲಿ ಹಾಕಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೌರಾಯುಕ್ತ ಬಿ.ಸಿ.ಬಸವರಾಜ್ ಹಾದಿಯನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚಿಸಿದ್ದರು. ಫೆ.22ರಂದು ಪೌರಾಯುಕ್ತರು ನೋಟಿಸ್ ಜಾರಿಗೊಳಿಸಿ ನೀಡಿದ ಸೂಚನೆಗೂ ಸ್ಪಂದಿಸದ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ಹಾಗೂ ನಗರಸಭೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ.

ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ: ನಂತರ ಮಾತನಾಡಿದ ಪೌರಾಯುಕ್ತ ಬಸವರಾಜ್, ನಗರಸಭಾ ವ್ಯಾಪ್ತಿಗೆ ಒಳಪಡುವ ಉದ್ಯಾನ, ಸಾರ್ವಜನಿಕ ರಸ್ತೆಗಳನ್ನು ಒತ್ತುವರಿ ಮಾಡುವುದು ಅಪರಾಧ. ನಗರಸಭೆ ವ್ಯಾಪ್ತಿಯ ಒಳಚರಂಡಿ, ವಿದ್ಯುತ್, ರಸ್ತೆ ಮತ್ತಿತರ ಸಾರ್ವಜನಿಕ ಜಾಗ ಒತ್ತುವರಿ ಮಾಡಿರುವ ದೂರುಗಳು ಕೇಳಿಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಾಚರಣೆ ಸಂದರ್ಭ ವೃತ್ತ ನಿರೀಕ್ಷಕ ಗುರುಪ್ರಸಾದ್, ನಗರಸಭೆ ಕಂದಾಯಾಧಿಕಾರಿ ಬಸವರಾಜ್, ಆರೋಗ್ಯ ಪರಿವೀಕ್ಷಕ ಈಶ್ವರಪ್ಪ, ಶಿವಾನಂದ್, ಜಗದೀಶ್, ಅಣ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net