3 ದಿನದಲ್ಲಿ ಹೋರ್ಡಿಂಗ್ಸ್ ತೆರವು?

hordings feb 24 2020
Published on

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ಜಾಹೀರಾತು ಫಲಕಗಳನ್ನು (ಹೋರ್ಡಿಂಗ್ಸ್) ಫೆ.27ರೊಳಗಾಗಿ ತೆರವುಗೊಳಿಸುವಂತೆ ಪಾಲಿಕೆ ಆಯುಕ್ತರು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್​ಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಜಾಹೀರಾತುಫಲಕಗಳ ತೆರವು ವಿಚಾರ ಕಳೆದ 6 ತಿಂಗಳಿಂದ ಚರ್ಚೆಯಲ್ಲಿತ್ತು. ಜಾಹೀರಾತು ಫಲಕಗಳು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ ಎಂದು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಹಲವು ವರ್ಷಗಳಿಂದ ಇದರ ವಿಚಾರಣೆ ನಡೆಯುತ್ತಿತ್ತು. ಆದರೆ, ಕಳೆದ ನವೆಂಬರ್​ನಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ, ನಗರದ ಸೌಂದರ್ಯ ಕಾಪಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಆಯುಕ್ತರು ಹೋರ್ಡಿಂಗ್​ಗಳ ತೆರವಿಗೆ ಸೂಚಿಸಿದ್ದಾರೆ.

ಈ ಸೂಚನೆಯ ಪ್ರಕಾರ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಮುನ್ನ ಸಂಬಂಧಪಟ್ಟ ಮಾಲೀಕ ಅಥವಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಬೇಕು. ತೆರವುಗೊಳಿಸಲು 7 ದಿನಗಳ ಕಾಲಾವಕಾಶ ನೀಡಬೇಕು. ಆದರೂ ತೆರವುಗೊಳಿಸದಿದ್ದರೆ ಅಧಿಕಾರಿಗಳೇ ಮುಂದೆ ನಿಂತು ತೆರವುಗೊಳಿಸಬೇಕು.

3 ದಿನಗಳಲ್ಲಿ ಇದೆಲ್ಲವೂ ಸಾಧ್ಯವೇ?: ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ಫೆ.12ರಂದು ಇನ್ನು 15 ದಿನಗಳ ಒಳಗಾಗಿ ಜಾಹೀರಾತುಫಲಕಗಳನ್ನು ತೆರವುಗೊಳಿಸುವಂತೆ ಎಲ್ಲ 8 ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಇಂಜಿನಿಯರ್​ಗಳಿಗೆ ಸೂಚಿಸಿದ್ದರು. ಈ ಗಡುವಿನಲ್ಲಿ ಈಗಾಗಲೇ 12 ದಿನಗಳು ಕಳೆದಿವೆ. ಇನ್ನು 3 ದಿನಗಳಲ್ಲಿ ತೆರವು ಕಾರ್ಯ ಪೂರ್ಣಗೊಳಿಸಬೇಕಿದೆ. ನೋಟಿಸ್ ನೀಡಿ, 7 ದಿನಗಳ ಕಾಲಾವಕಾಶ ಕೊಟ್ಟ ಬಳಿಕ ಫಲಕಗಳನ್ನು ತೆರವು ಮಾಡಬೇಕಿದೆ. ಗಡುವಿನ ಪ್ರಕಾರ ಮೂರು ದಿನಗಳಲ್ಲಿ ಎಲ್ಲ ಹೋರ್ಡಿಂಗ್​ಗಳ ತೆರವು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಜಂಟಿ ಆಯುಕ್ತರು, ಮುಖ್ಯ ಇಂಜಿನಿಯರ್ ಹೊಣೆ

1) ಫೆ.27ರೊಳಗಾಗಿ ಗುರುತಿಸಲಾಗಿರುವ ಜಾಹೀರಾತು ಫಲಕ ತೆರವು ಮಾಡಬೇಕು

2) ತೆರವು ಕಾರ್ಯದ ವೇಳೆ ನಿಯಮಗಳ ಉಲ್ಲಂಘನೆ ಮತ್ತು ವಿಳಂಬಕ್ಕೆ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ

3) ಪ್ರತಿದಿನದ ತೆರವು ಕಾರ್ಯಾಚರಣೆ ಮಾಹಿತಿ ಇ-ಮೇಲ್ ಮಾಡಬೇಕು

4) ತೆರವು ಕಾರ್ಯಾಚರಣೆ ವಿಡಿಯೋ ಚಿತ್ರೀಕರಣ ಮಾಡಬೇಕು

5) ತೆರವು ಕಾರ್ಯಕ್ಕೆ ರಚಿಸಲಾದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು, ಮಹಜರ್ ತಯಾರಿಸಬೇಕು

6) ತೆರವುಗೊಳಿಸಿದ ಕಬ್ಬಿಣದ ಹಂದರಗಳನ್ನು ಒಂದೆಡೆ ಸಂಗ್ರಹಿಸಿ, ನಿಯಮಾನುಸಾರ ಬಹಿರಂಗ ಹರಾಜು ಹಾಕಬೇಕು

7) ಜಾಹೀರಾತುಫಲಕ ಮರುಸ್ಥಾಪನೆ ಗೊಳ್ಳದಂತೆ ಎಚ್ಚರವಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net