

ಬಸವಕಲ್ಯಾಣ: ನಗರದಲ್ಲಿ ಸಂಚಾರಕ್ಕೆ ಸಮಸ್ಯೆ ಒಡ್ಡುತ್ತಿರುವ ರಸ್ತೆ ಬದಿಯ ಅತಿಕ್ರಮಣ ತೆರವಿಗೆ ಮುಂದಾಗಿರುವ ನಗರಸಭೆ, ಫುಟ್‌ಪಾತ್‌ನಲ್ಲಿದ್ದ ಶೆಡ್‌ಗಳನ್ನು ಶುಕ್ರವಾರ ತೆರವುಗೊಳಿಸಿತು.
ಪೊಲೀಸ್ ಇತರ ಇಲಾಖೆ ಸಹಕಾರದಿಂದ ಸಿದ್ಧತೆಗಳನ್ನು ಮಾಡಿಕೊಂಡು ಬೆಳಗ್ಗೆ ಬುಲ್ಡೋಜರ್‌ನೊಂದಿಗೆ ಕಾರ್ಯಾಚರಣೆಗೆ ಇಳಿದ ನಗರಸಭೆ ಸಿಬ್ಬಂದಿ ನಗರದ ಮುಖ್ಯ ರಸ್ತೆ ಬದಿ, ಕೆಲವರು ಫುಟ್‌ಪಾತ್ ಅತಿಕ್ರಮಿಸಿ ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ತೆರವುಗೊಳಿಸಿ ಶಾಕ್ ನೀಡಿದರು.
ಸಹಾಯಕ ಆಯುಕ್ತ ಪ್ರಕಾಶ ಕುದರೆ, ಪೌರಾಯುಕ್ತ ರಾಜು ಡಿ.ಬಣಕಾರ ನೇತೃತ್ವದಲ್ಲಿ ತ್ರಿಪುರಾಂತನಿಂದ ಐಬಿ ಬಳಿ ತೆರವು ಕಾರ್ಯಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್ ಶಾಂತಗೌಡ ಬಿರಾದಾರ, ಪಿಎಸ್‌ಐ ಅಂಬರೀಶ್ ವಾಗ್ಮೋಡೆ, ಸಂಚಾರ ಪಿಎಸ್‌ಐ ಸುವರ್ಣಾ ಮಲಶೆಟ್ಟಿ, ಎಇಇ ಶಿವಶರಣಪ್ಪ ಸಜ್ಜನಶೆಟ್ಟಿ, ಪರಿಸರ ಅಭಿಯಂತರ ಮನೋಜಕುಮಾರ ಕಾಂಬಳೆ, ಅಗ್ನಿಶಾಮಕ ದಳ, ಅರಣ್ಯ, ಜೆಸ್ಕಾಂ ಅಧಿಕಾರಿಗಳ ಸಮ್ಮುಖ ಕಾರ್ಯಾಚರಣೆ ನಡೆಯಿತು.
ತೆರವು ಕಾರ್ಯ ಆರಂಭಿಸುತ್ತಿದ್ದಂತೆ ಜಾಗ ಒತ್ತುವರಿ ಮಾಡಿದವರು ಓಡೋಡಿ ಬಂದು ಅಂಗಡಿಗಳಲ್ಲಿದ್ದ ವಸ್ತುಗಳನ್ನು ತೆಗೆಯಲು ಆರಂಭಿಸಿದರೆ, ಕೆಲವರು ರಸ್ತೆಗೆ ಬಂದಿದ್ದ ಅಂಗಡಿ ಮೇಲಿನ ಪತ್ರಾ ತೆಗೆಸಲು ಮುಂದಾದರು.
ಒತ್ತುವರಿ ತೆರವು ಮಾಡಿಕೊಳ್ಳುವಂತೆ ಹಿಂದೆ ಪೌರಾಯುಕ್ತರು ಸೂಚನೆ ನೀಡಿದ್ದರೂ ಕ್ಯಾರೆ ಎನ್ನದ್ದರಿಂದ ತ್ರಿಪುರಾಂತನಿಂದ ಶುರುವಾದ ಕಾರ್ಯಾಚರಣೆ ಮುಖ್ಯ ರಸ್ತೆ ಮಾರ್ಗವಾಗಿ ಹರಳಯ್ಯ ವೃತ್ತ, ಅಂಬೇಡ್ಕರ್ ವೃತ್ತದ ಬಳಿ ನಡೆಯಿತು. ಈ ವೇಳೆ ಕೆಲ ಅಂಗಡಿ ಮಾಲೀಕರು ನಗರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೂ ನೀಡಿದ ಸಮಯಾವಕಾಶ ಮುಗಿದಿದ್ದು, ಇನ್ನಷ್ಟು ಸಮಯ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಮುಂದುವರಿಯಲಿದೆ ಕಾರ್ಯಾಚರಣೆ: ನಗರದ ರಸ್ತೆ ಬದಿಯ ಫುಟ್‌ಪಾತ್ ಆಕ್ರಮಿಸಿರುವ ಶೆಡ್, ಕೆಟ್ಟೆಗಳ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೌರಾಯುಕ್ತ ರಾಜು ಬಣಕಾರ ತಿಳಿಸಿದ್ದಾರೆ. ಶನಿವಾರ ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತ, ಭಾನುವಾರ ಗಾಂಧಿ ವೃತ್ತದಿಂದ ತರಕಾರಿ ಮಾರುಕಟ್ಟೆ, ಚಿಕನ್ ಮಾರುಕಟ್ಟೆ, ರಾಜಕಮಲ್ ಹೋಟೆಲ್‌ನಿಂದ ಹುಲಸೂರು ರಸ್ತೆ, ಜು.೮ರಂದು ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣ, ೯ರಂದು ಹೂವು ಮಾರುಟ್ಟೆ, ರಾಜಾಬಾಗ ಸವಾರ್ ದರ್ಗಾ ರಸ್ತೆಯಿಂದ ಗಾಂಧಿ ವೃತ್ತ, ೧೦ರಂದು ನಾರಾಯಣಪುರ ಕ್ರಾಸ್‌ನಿಂದ ನಾಗಣ್ಣ ಕಟ್ಟೆ, ೧೧ರಂದು ನಗರಸಭೆಯಿಂದ ಕಾಳಿ ಗಲ್ಲಿ, ಜೀಜಾಮಾತಾ ಶಾಲೆ, ೧೨ರಂದು ತ್ರಿಪುರಾಂತ ಐಬಿಯಿಂದ ಹೈವೇ, ೧೩ರಂದು ಭೀಮನಗರ ಬಳಿ ಹನುಮಾನ ಮಂದಿರದಿAದ ಮೌಲಾನಾ ಯಾಕೂಬ್ ದರ್ಗಾವರೆಗಿನ ರಸ್ತೆ ಜಾಗ ಒತ್ತುವರಿ ತೆರವುಗೊಳಿಸುವುದಾಗಿ ಹೇಳಿದರು.
ಧುಮ್ಮನಸೂರದಲ್ಲೂ ತೆರವು
ಹುಮನಾಬಾದ್: ಧುಮ್ಮನಸೂರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್ ಹಾಗೂ ಅತಿಕ್ರಮಿಸಿರುವ ಸ್ಥಳಗಳ ತೆರವು ಕಾರ್ಯಾಚರಣೆ ಶುಕ್ರವಾರ ಗ್ರಾಮ ಪಂಚಾಯಿತಿಯಿAದ ನಡೆಯಿತು. ಪಿಡಿಒ ಮಲ್ಲಿಕಾರ್ಜುನ ಸಾಗರ ನೇತೃತ್ವದಲ್ಲಿ ಜೆಸಿಬಿ ನೆರವಿನಿಂದ ರಸ್ತೆಯಲ್ಲಿದ್ದ ಶೆಡ್ ಇತರ ಕಟ್ಟೆಗಳನ್ನು ಸುಗಮ ಸಂಚಾರ ದೃಷ್ಟಿಯಿಂದ ತೆರವುಗೊಳಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೀಪಿಕಾ ನಾಯ್ಕರ್ ಕಾರ್ಯಾಚರಣೆ ಪರಿಶೀಲಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಪ್ಪ ಭೂತಾಳೆ ಇತರರಿದ್ದರು.