

ಮಂಡ್ಯ: ತಾಲೂಕಿನ ಮಾರಗೌಡನಹಳ್ಳಿಯಲ್ಲಿ ದಶಕಗಳಿಂದ ಬಗೆಹರಿಯದೇ ಉಳಿದುಕೊಂಡಿದ್ದ ಸರ್ಕಾರಿ ಜಾಗ ಒತ್ತುವರಿ ತೆರವು ಸಮಸ್ಯೆಯನ್ನು ಗುರುವಾರ ತಹಸೀಲ್ದಾರ್ ಕುಂಞ ಅಹಮದ್ ಬಗೆಹರಿಸಿದರು. ಜಾಗವನ್ನು ಸೊಸೈಟಿಗೆ ಹಸ್ತಾಂತರಿಸಿ ಸಹಕಾರ ಬ್ಯಾಂಕ್ ಕಟ್ಟಡ ಕಟ್ಟಲು ಅನುವು ಮಾಡಿಕೊಟ್ಟರು.
ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಸ್ವತ್ತಿನ ಪೈಕಿ ಸುಮಾರು 12,750 ಅಡಿ ಜಾಗವನ್ನು ಕೆಲವರು ಬಳಕೆ ಮಾಡಿಕೊಂಡಿದ್ದರು. ಆ ಜಾಗದಲ್ಲಿ ಜಾನುವಾರು ಕಟ್ಟಿಕೊಂಡಿದ್ದರು. ಇತ್ತ ಸೊಸೈಟಿಗೆ ಕಟ್ಟಡ ನಿರ್ಮಿಸಿಕೊಳ್ಳಲು ನಬಾರ್ಡ್‌ನಿಂದ 46 ಲಕ್ಷ ರೂ. ಬಿಡುಗಡೆಯಾಗಿತ್ತು. ಆದರೆ ಜಾಗವನ್ನು ಬಿಟ್ಟುಕೊಡಲು ಒಪ್ಪಿರಲಿಲ್ಲ. ಇದು ಹಲವು ವರ್ಷಗಳಿಂದ ದೊಡ್ಡ ಸಮಸ್ಯೆಯಾಗಿಯೇ ಉಳಿದುಕೊಂಡಿತ್ತು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕುಂಞ ಅಹಮದ್ ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿ ಮಾಡಿಕೊಂಡಿದ್ದವರಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಿದರು. ಸ್ಥಳದಲ್ಲಿದ್ದು ಜೆಸಿಬಿ ಮೂಲಕ ಒತ್ತುವರಿಯನ್ನು ತೆರವು ಮಾಡಿಸಿದರು. ಜಾಗ ಒತ್ತುವರಿ ಮಾಡಿಕೊಂಡಿರುವವರಿಗೂ ಅನ್ಯಾಯವಾಗದಂತೆ ಐವರಿಗೆ ತಲಾ 10 ಸಾವಿರ ರೂ. ಪರಿಹಾರವನ್ನು ಸೊಸೈಟಿ ಮೂಲಕ ವಿತರಿಸಲಾಯಿತು. ಇದೀಗ ಸಮಸ್ಯೆ ಬಗೆಹರಿದಿರುವುದರಿಂದ ಕಟ್ಟಡ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ.
10 ಗುಂಟೆ ಹಸ್ತಾಂತರ: ಇದೇ ಗ್ರಾಮದಲ್ಲಿ ಅಂಬೇಡ್ಕರ್ ಭವನ ಸಮೀಪ 10 ಗುಂಟೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಅವರಿಂದಲೂ ಜಾಗ ಬಿಡಿಸಿ ಅರ್ಧಕ್ಕೆ ಸ್ಥಗಿತಗೊಂಡಿರುವ ಅಂಬೇಡ್ಕರ್ ಭವನಕ್ಕೆ ಹಸ್ತಾಂತರಿಸಲಾಯಿತು.
ಕಾರ್ಯಾಚರಣೆ ಸಂದರ್ಭದಲ್ಲಿ ಡಿಆರ್ ವಿಕ್ರಮ ರಾಜೇ ಅರಸ್, ತಾಪಂ ಇಒ ವೀಣಾ, ಪಿಡಿಒ ವಿನುತಾ, ಡೆಪ್ಯೂಟಿ ತಹಸೀಲ್ದಾರ್ ಮೂಗುರೇಗೌಡ, ಆರ್‌ಐ ಉಮೇಶ್, ವಿಎಗಳಾದ ಚಿನ್ನಕ್ಕ, ಗೋವರ್ಧನ್ ಇತರರಿದ್ದರು.