

ಬೆಂಗಳೂರು: ಬಿಬಿಎಂಪಿಯ ದಾಸರಹಳ್ಳಿ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧೆಡೆ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ಭಾಗಗಳನ್ನು ತೆರವುಗೊಳಿಸಿದ್ದು, ಮತ್ತೆ ಆ ಸ್ಥಳವನ್ನು ಆಕ್ರಮಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ದಾಸರಹಳ್ಳಿ ಭಾಗದ ಕೆಐಎಡಿಬಿ ರಸ್ತೆಯಲ್ಲಿ ಶನಿವಾರ ಪಾದಾಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಎನ್‌ಟಿಟಿಎಫ್ ವೃತ್ತದಿಂದ 14ನೇ ಕ್ರಾಸ್ ಜಂಕ್ಷನ್ ವರೆಗಿನ ಅನಧಿಕೃತ ಒಎಫ್ಸಿ ಸೇರಿ ಬಿದ್ದ ರೆಂಬೆ - ಕೊಂಬೆ, ಪಾದಾಚಾರಿಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದ ಸೈಜ್ ಕಲ್ಲುಗಳನ್ನು ತೆರವುಗೊಳಿಸಲಾಯಿತು ಎಂದು ದಾಸರಹಳ್ಳಿ ವಲಯದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ತಿಳಿಸಿದ್ದಾರೆ.
ಬೊಮ್ಮನಹಳ್ಳಿ ವಲಯದ ಅಂಜನಾಪುರ ಉಪವಿಭಾಗ ಬನ್ನೇರುಘಟ್ಟ ಮುಖ್ಯರಸ್ತೆ ಹಾಗೂ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪಾದಚಾರಿ ಮಾರ್ಗದಲ್ಲಿ ಇರಿಸಿದ್ದ ಮಳಿಗೆಗಳನ್ನು ತೆರವುಗೊಳಿಸಲಾಯಿತು.
ಒತ್ತುವರಿದಾರರಿಗೆ ದಂಡ:
ದಾಸರಹಳ್ಳಿಯಲ್ಲಿ ಪಾದಾಚಾರಿ ಮಾರ್ಗದಲ್ಲಿನ 4 ತಳ್ಳುಗಾಡಿಗಳನ್ನು ತೆರವುಗೊಳಿಸಲಾಯಿತು. ಅಲ್ಲದೇ, ನಾಲ್ಕು ಸ್ಥಳಗಳಲ್ಲಿ ಪಾದಾಚಾರಿ ಮಾರ್ಗವನ್ನು ಒತ್ತುವರಿ ಮಾಡಿದವವರಿಗೆ 4,000 ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಆಯಾ ವಲಯದ ಕಾರ್ಯಪಾಲಕ ಅಭಿಯಂತರ, ಎಇಇ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.