ಬಂಡಿ, ಕಾಲುದಾರಿ ಒತ್ತುವರಿ ತೆರವು

25 LKR PH 1
ರಂಗಯ್ಯನ ಅಗ್ರಹಾರದಲ್ಲಿ ಒತ್ತುವರಿ ತೆರುವುಗೊಳಿಸುತ್ತಿರುವುದು.
Published on

ಕಂದಾಯ ಅಧಿಕಾರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸರ್ವೇ

ಮಾಸ್ತಿ: ಮಾಸ್ತಿ ಹೋಬಳಿಯ ತುರುಣಿಸಿ ಗ್ರಾಪಂನ ರಂಗಯ್ಯನ ಅಗ್ರಹಾರದಲ್ಲಿ ಒತ್ತುವರಿಯಾಗಿದ್ದ ಮೂಲ ನಕಾಶೆ ಕಾಲು ದಾರಿ ಹಾಗೂ ಬಂಡಿ ದಾರಿ ಒತ್ತುವರಿಯನ್ನು ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದರು.

ತಹಸೀಲ್ದಾರ್​ ಆದೇಶದಂತೆ ಪೊಲೀಸ್​ ಬಂದೊಬಸ್ತ್​ ನಲ್ಲಿ ಮಾಸ್ತಿ ನಾಡಕಚೇರಿ ಕಂದಾಯ ಅಧಿಕಾರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸರ್ವೇ ನಡೆಸಲಾಯಿತು. ಸರ್ವೇ ನಂ.8, 9, 12, 14ರ ಕಾಲು ದಾರಿ ಹಾಗೂ ಸರ್ವೇ ನಂ.14, 28, 15, 19, 22, 23ರ ಒತ್ತುವರಿಯಾಗಿದ್ದ ಬಂಡಿ ದಾರಿ ತೆರುವುಗೊಳಿಸುವಂತೆ ತಹಸೀಲ್ದಾರ್​ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಯ ಮೇರೆಗೆ ತಹಸೀಲ್ದಾರ್​ ರೂಪಾ ಆದೇಶದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಪತ್ತೆ ಹಚ್ಚಿ, ಒತ್ತುವರಿದಾರರಿಗೆ ನೋಟಿಸ್​ ನೀಡಿ ಜಾಗ ಪರಿಶೀಲಿಸಿ ಒತ್ತುವರಿಯಾಗಿದ್ದ ಜಾಗದ ಗಡಿ ಗುರುತಿಸಿ ಸೋಮವಾರ ತೆರವು ಕಾರ್ಯಾಚರಣೆ ನಡೆಸಿದರು.

ಒತ್ತುವರಿ ತೆರುವಿನಿಂದ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ಸ್ಥಳದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮಾಸ್ತಿ ಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ಓಂ ಪ್ರಕಾಶ್​ ಗೌಡ ಹಾಗೂ ಕೋಲಾರದ ಡಿಆರ್​ ಪೊಲೀಸರ ಬಂದೋಬಸ್ತ್​ನಲ್ಲಿ ಕಾರ್ಯಚರಣೆ ನಡೆಯಿತು.

ರೆವಿನ್ಯೂ ಇಲಾಖೆಯ ಅಧಿಕಾರಿ ನಾರಾಯಣಸ್ವಾಮಿ, ಸರ್ವೇ ಇಲಾಖೆ ಅಶೋಕ್​ ಕುಮಾರ್​, ಗ್ರಾಮ ಲೆಕ್ಕಾಧಿಕಾರಿ ಪುಂಡಲೀಕ ಚಲವಾದಿ, ಗ್ರಾಪಂ ಅಧ್ಯಕ್ಷೆ ಪ್ರಿಯಾಂಕಾ ಮುನಿರಾಜು, ಪಿಡಿಒ ಕಮಲಾ ಇದ್ದರು.

ತೋಟದಲ್ಲೇ ಮನೆ ನಿರ್ಮಿಸಿಕೊಂಡಿದ್ದವರಿಗೆ ಹೋಗಿಬರಲು ದಾರಿ ಇಲ್ಲದೆ ತೊಂದರೆಯಾಗಿತ್ತು. ಈ ಬಗ್ಗೆ ಪಥ ಬದಲಾವಣೆ ಮಾಡಿ ರಸ್ತೆ ನಿರ್ಮಿಸಲು ಈ ಭಾಗದ ರೈತರೊಂದಿಗೆ ಮಾತನಾಡಿ, 15 ರಿಂದ 20 ಅಡಿ ರಸ್ತೆ ನಿರ್ಮಿಸಲು ಜಮೀನಿಗೆ ಬೆಲೆ ನಿಗದಿಪಡಿಸಲಾಗಿತ್ತು. ಕೆಲವರು ಸ್ವಾರ್ಥಕ್ಕಾಗಿ ರಸ್ತೆ ಬಿಡಲು ನಿರಾಕರಿಸಿದರು. ಅಲ್ಲದೆ, ಈ ಭಾಗದಲ್ಲಿರುವ 5 ಗುಂಟೆ, 10 ಗುಂಟೆ ಜಮೀನು ಹೊಂದಿರುವವರ ಜಮೀನಿನಲ್ಲಿ ಒತ್ತುವರಿ ತೆರವು ಮಾಡಿರುವುದರಿಂದ ಜಮೀನು ತುಂಡುಗಳಾಗಿದ್ದು, ಇದರಿಂದ ರೈತರಿಗೆ ಉಪಯೋಗವಿಲ್ಲ. ಈ ಬಗ್ಗೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. - ರಮೇಶ್​ ಕರೀಸಂದ್ರ ತಾಲೂಕಿನ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲೂ ಮೂಲ ನಕಾಶೆಯ ಕಾಲು ದಾರಿ ಹಾಗೂ ಬಂಡಿ ದಾರಿ ಒತ್ತುವರಿಯಾಗಿದೆ. ಅಲ್ಲದೆ, ಸರ್ಕಾರಿ ಗೋಮಾಳ, ಗೋಗುಂಟೆ, ಕೆರೆ, ರಾಜಕಾಲುವೆ ಸೇರಿ ಇನ್ನಿತರೆ ಒತ್ತುವರಿ ತೆರುವುಗೊಳಿಸಿ ಅನುಕೂಲ ಕಲ್ಪಿಸಲಿ. - ವೆಂಕಟೇಶ್​, ದಸಂಸ ಸಂಚಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net