1.39 ಎಕರೆ ಗುಂಡುತೋಪು ಒತ್ತುವರಿ ತೆರವು

Dbp01
ರಾಜಘಟ್ಟದಲ್ಲಿ ಒತ್ತುವರಿಯಾಗಿದ್ದ ಜಮೀನು ತೆರವು ಬಳಿಕ ಕಂದಾಯ ನಿರೀಕ್ಷಕ ಶಿವಪ್ರಸಾದ್ ಗ್ರಾಮ ಪಂಚಾಯತಿ ಪಿಡಿಒ ಸಿದ್ದರಾಜುಗೆ ದಾಖಲೆ ಹಸ್ತಾಂತರ ಮಾಡಿದರು. ಗ್ರಾಮ ಲೆಕ್ಕಿಗ ಗಂಗರಾಜು, ಪೊಲೀಸ್ ಸಿಬ್ಬಂದಿ ಸಂಗೀತ ಕೋಳೂರ, ನ್ಯಾಮಗೌಡ, ಮುಖಂಡರಾದ ಗಣೇಶ್, ಅನಂತ್, ಆನಂದ್, ಸರ್ವೇಯರ್ ಶಿವಕುಮಾರ್ ಇದ್ದರು
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಾಜಘಟ್ಟದ ಸ.ನಂ.212ರಲ್ಲಿ ಒತ್ತುವರಿಯಾಗಿದ್ದ 1 ಎಕರೆ 39 ಗುಂಟೆ ಸರ್ಕಾರಿ ಗುಂಡುತೋಪು ಜಾಗವನ್ನು ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯಿಂದ ಯಶಸ್ವಿಯಾಗಿ ತೆರವು ಮಾಡಲಾಯಿತು.
ಹಲವು ವರ್ಷಗಳಿಂದ ಗ್ರಾಮದ ವ್ಯಕ್ತಿ ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದರು. ಹೀಗಾಗಿ ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆಯು ಸರ್ಕಾರಿ ಜಾಗ ಒತ್ತುವರಿ ತೆರವು ಮಾಡುವಂತೆ 6 ತಿಂಗಳಿಂದ ತಹಸೀಲ್ದಾರ್ ಸೇರಿ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಗೆ ಮನವಿ ಕೊಟ್ಟು ಸತತ ಹೋರಾಟ ನಡೆಸಿತ್ತು. ಹೋರಾಟದ ಫಲವಾಗಿ ಕಂದಾಯ ನಿರೀಕ್ಷಕ ಶಿವಪ್ರಸಾದ್ ಸಮ್ಮುಖದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಗುಂಡುತೋಪು ಜಾಗ ತೆರವುಗೊಳಿಸಿ ಗ್ರಾಪಂಗೆ ಹಸ್ತಾಂತರಿಸಿದರು. ಅಲ್ಲದೆ ಅಲ್ಲದೆ ಗುಂಡುತೋಪು ಜಾಗದಲ್ಲಿ ಜೆಸಿಬಿ ಮೂಲಕ ಟ್ರಂಚ್ ಹೊಡೆಸಲಾಯಿತು.
ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು.
ಸೇನೆ ಮುಖಂಡ ಗಣೇಶ್ ರಾಜಘಟ್ಟ ಮಾತನಾಡಿ, ಸಂಘಟನೆ ಮುಖ್ಯ ಉದ್ದೇಶ ಗ್ರಾಮದಲ್ಲಿನ ಸರ್ಕಾರಿ ಅಸ್ತಿ ಉಳಿಸುವುದು, 6 ತಿಂಗಳ ಹೋರಾಟಕ್ಕೆ ಜಯ ಸಿಕ್ಕಿದೆ, ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞನೆ ಸಲ್ಲಿಸುತ್ತೇವೆ, ಬೇರೆಯವರ ಪಾಲಾಗಿದ್ದ ಜಾಗವೀಗ ಗ್ರಾಮಸ್ಥರ ಪಾಲಾಗಿದೆ. ಸರ್ಕಾರಿ ಗುಂಡು ತೋಪು ಜಾಗದಲ್ಲಿ ಉದ್ಯಾನವನ ಅಭಿವೃದ್ಧಿ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net