

ಮಳವಳ್ಳಿ: ತಾಲೂಕಿನ ಕಲ್ಕುಣಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ರಸ್ತೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತೆರವುಗೊಳಿಸಿದರು.
ಗ್ರಾಮದ ಸರ್ಕಾರಿ ಸರ್ವೇ ನಂ. 249 ಹಾಗೂ 250 ರಲ್ಲಿ ಹಾದು ಹೋಗಿದ್ದ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಹಲವು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು. ಸಾರ್ವಜನಿನರ ಅನುಕೂಲಕ್ಕಾಗಿ ಒತ್ತುವರಿಯಾಗಿರುವ ರಸ್ತೆಯನ್ನು ತೆರವು ಮಾಡುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಕಂದಾಯ ಇಲಾಖೆ ವರದಿ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ.ಲೋಕೇಶ್ ಸ್ಥಳ ಮಹಜರು ನಡೆಸಿ ಸರ್ಕಾರಿ ರಸ್ತೆ ತೆರವು ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಲಿಂಗಸ್ವಾಮಿ ಪೊಲೀಸ್ ಭದ್ರತೆ ಪಡೆದು ಒತ್ತುವರಿಯಾಗಿದ್ದ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ತೆರವು ಮಾಡಿದರು.
ಗ್ರಾಮ ಲೆಕ್ಕಾಧಿಕಾರಿ ಕೆ.ಪಿ.ಮಲ್ಲೇಶ್, ಪಿಡಿಒ ಸೆಂಥಿಲ್, ಗ್ರಾಮದ ಮುಖಂಡರಾದ ಮಲ್ಲಪ್ಪ, ಸಿದ್ದರಾಜು, ಮಲ್ಲಣ್ಣ, ಕೆ.ಆರ್.ಪುಟ್ಟಸ್ವಾಮಿ, ಪರಮೇಶ್ ಇತರರು ಇದ್ದರು.