

ಕೊಳ್ಳೇಗಾಲ: ತಾಲೂಕಿನ ಸರಗೂರು ಗ್ರಾಮದ ಕಾವೇರಿ ನದಿ ದಡದಲ್ಲಿರುವ ಸರ್ಕಾರಿ ಜಮೀನು ಒತ್ತುವರಿಯನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಆದೇಶದಂತೆ ಬುಧವಾರ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿ ಟ್ರಂಚ್ ನಿರ್ಮಿಸಿದರು.
ಗ್ರಾಮದ ಕಾವೇರಿ ನದಿ ತಟದಲ್ಲಿರುವ ಸ್ನಾನಘಟ್ಟ ಜಾಗಕ್ಕೆ ಹೊಂದಿಕೊಂಡಂತಿರುವ ಸರ್ವೇ ನಂ.298ರಲ್ಲಿ 20 ಸೆಂಟ್ ಹಾಗೂ 299/ಬಿ ರಲ್ಲಿ 90 ಸೆಂಟ್ಸ್ ಒಟ್ಟು 1.10 ಸೆಂಟ್ ಜಮೀನನ್ನು ಡಿ.ಕೃಷ್ಣಪ್ಪ ಅವರು ಒತ್ತುವರಿ ಮಾಡಿಕೊಂಡಿರುವುದು ಎಡಿಎಲ್‌ಆರ್ ಹಾಗೂ ತಾಲೂಕು ಭೂಮಾಪಕರು ನೀಡಿದ್ದ ನಕ್ಷೆಯಿಂದ ತಿಳಿದಿತ್ತು. ಅಲ್ಲದೆ ಗಡಿ ಗುರುತು ಕಲ್ಲುಗಳನ್ನು ತೆಗೆದು ಹಾಕಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ತಹಸೀಲ್ದಾರ್ ಐ.ಇ. ಬಸವರಾಜು ಅವರಿಗೆ ಒತ್ತುವರಿ ತೆರವುಗೊಳಿಸಿ ನಿಯಮಾನುಸಾರ ಒತ್ತುವರಿದಾರನ ವಿರುದ್ಧ ಕ್ರಮವಹಿಸುವಂತೆ ಜು.5ರಂದು ಸೂಚನೆ ನೀಡಿದ್ದರು.
ಅದರಂತೆ ಉಪತಹಸಿಲ್ದಾರ್ ವಿಜಯ್‌ಕುಮಾರ್, ಪಾಳ್ಯ ಆರ್‌ಐ ರಂಗಸ್ವಾಮಿ, ಕಸಬಾ ಆರ್‌ಐ ನಿರಂಜನ್, ತಾಲೂಕು ಸರ್ವೇಯರ್ ಪುಟ್ಟರಾಜು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಾಂತರ ಠಾಣೆ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಜಮೀನನ್ನು ಅಳತೆ ಮಾಡಿ ಜೆಸಿಬಿ ಮೂಲಕ ಟ್ರಂಚ್ ತೆಗೆದು ಗಡಿ ಗುರುತು ಮಾಡಿದರು.
ಒತ್ತುವರಿ ಕಾರ್ಯಾಚರಣೆಯಲ್ಲಿ ಗ್ರಾಮಲೆಕ್ಕಿಗರಾದ ಭೀಮಪ್ಪ, ಶಾಂತರಾಜು, ಪ್ರದೀಪ್, ಪ್ರಸಾದ್, ಅನಿಲ್, ಸತೀಶ್, ವಿಷ್ಣು, ಶಿವರಾಜ್ ಇದ್ದರು.
ಒತ್ತುವರಿ ಪ್ರಕರಣ ಹಿನ್ನೆಲೆ: ಸರಗೂರಿನ ಕಾವೇರಿ ನದಿತಟದಲ್ಲಿ ಜಮೀನು ಹೊಂದಿರುವ ಡಿ.ಕೃಷ್ಣಪ್ಪ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಸರಗೂರು ಗ್ರಾಮದ ಆದಿಕರ್ನಾಟಕ ಜನಾಂಗ ಮುಖಂಡರು ಫೆ.11ರಂದು ತಾಲೂಕು ಕಚೇರಿ ಮುಂಭಾಗ ತಡರಾತ್ರಿವರೆಗೂ ಪ್ರತಿಭಟಿಸಿ ದೂರು ನೀಡಿದ್ದರು.
ಬಳಿಕ ಸ್ನಾನ ಘಟ್ಟದ ಜಮೀನಿಗೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ ಅಂದಿನ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್‌ಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದರು. ಅಂತೆಯೇ ತನಿಖೆ ಪೂರ್ಣಗೊಳಿಸಿ, ಮೇ.26 ರಂದು ಜಿಲ್ಲಾಧಿ ಕಾರಿಗೆ ಎಸಿ ವರದಿ ಸಲ್ಲಿಸಿದ್ದರು. ಬಳಿಕ ಜು.5 ರಂದು ಡಿಸಿ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಶೀಘ್ರವೇ ಕ್ರಮ ವಹಿಸಲು ತಹಸೀಲ್ದಾರ್ ಬಸವರಾಜು ಅವರಿಗೆ ಸೂಚಿಸಿದ್ದರು.
ಈ ನಡುವೆ ಕಾವೇರಿ ನದಿಗೆ ಅಕ್ರಮವಾಗಿ ಮೋಟಾರ್ ಅಳವಡಿಸಿ ಪಂಪ್ ಮಾಡುತ್ತಿರುವುದು ತನಿಖೆಯಲ್ಲಿ ತಿಳಿದು ಬಂದಿದ್ದು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೆಸ್ಕ್ ಎಇಇಗೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಆದೇಶವಾಗಿ 1 ತಿಂಗಳಾದರೂ ವಿದ್ಯುತ್ ಕಂಬಗಳು ಹಾಗು ಪಂಪ್‌ಹೌಸ್‌ಗಳನ್ನು ಸೆಸ್ಕ್ ಅಧಿಕಾರಿಗಳು ತೆರವ ಗೊಳಿಸಿದೆ ಮೀನಾಮೇಷ ಎಣಿಸು ತ್ತಿದ್ದು, ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ನೀಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಸರಗೂರು ಗ್ರಾಮದ ನದಿ ತಟದಲ್ಲಿರುವ ಸ.ನಂ.298ರಲ್ಲಿ 20ಸೆಂಟ್ ಹಾಗೂ ಸ.ನಂ.299/ಬಿ ಯಲ್ಲಿ 90 ಸೆಂಟ್ ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಿ ಟ್ರಂಚ್ ತೆಗೆಸಲಾಗಿದೆ.
ವಿಜಯ್‌ಕುಮಾರ್ ಉಪತಹಸಿಲ್ದಾರ್,ಕೊಳ್ಳೇಗಾಲ