

ಬ್ಯಾಡಗಿ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಸ್ತೆಯಲ್ಲಿ ಶಿಥಿಲಗೊಂಡಿರುವ ಕಟ್ಟಡಗಳನ್ನು ಶೀಘ್ರದಲ್ಲೆ ತೆರವುಗೊಳಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ತಿಳಿಸಿದರು.
ಪುರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮುಖ್ಯ ರಸ್ತೆಯಲ್ಲಿ 19 ಕಟ್ಟಡಗಳು ಶಿಥಿಲಾವ್ಯವಸ್ಥೆಯಲ್ಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ. ಸಂಬಂಧಿಸಿದ ಇಂಜಿನಿಯರ್ ಪರಿಶೀಲನೆ ನಡೆಸಿ ವರದಿ ನೀಡಿದ್ದು, ಕಟ್ಟಡಗಳ ತೆರವಿಗೆ ಲೋಕೋಪಯೋಗಿ ಇಲಾಖೆಗೆ ಪುರಸಭೆಯಿಂದ ಶುಲ್ಕ ತುಂಬಬೇಕಿದೆ ಎಂದು ವಿಷಯ ಪ್ರಸ್ತಾಪಿಸಿದರು.
ನೀರಿನ ಸಮಸ್ಯೆಗೆ ಪರಿಹಾರ ಕೊಡ್ರಿ: ಸದಸ್ಯ ಮಲ್ಲಮ್ಮ ಪಾಟೀಲ ಹಾಗೂ ಕಲಾವತಿ ಬಡಿಗೇರ ಮಾತನಾಡಿ, ನಮ್ಮ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಹೊಳೆಯಪ್ಪಗೋಳ, ಕೆಲ ವಾರ್ಡ್‌ಗಳಲ್ಲಿ ಪೈಪಲೈನ್ ಸಮಸ್ಯೆಯಿದ್ದು, ಹೊಸಲೈನ್ ಅಳವಡಿಸಿದ್ದೇವೆ. ಎಲ್ಲಿ ನೀರು ಬರುವುದಿಲ್ಲವೋ ಅಲ್ಲೆಲ್ಲ ವಾಲ್ ಹಾಕಿ ನೀರು ಪೂರೈಕೆಗೆ ಸೂಚಿಸಲಾಗಿದೆ.
ಪಟ್ಟಣದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸುವ ವೇಳೆ ಹೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು ಪುರಸಭೆಯಿಂದ ನಿರಾಕ್ಷೇಪಣೆ ಪತ್ರ ಕಡ್ಡಾಯವಾಗಿ ಪಡೆಯಬೇಕು. ಈ ಕುರಿತು ಮೇಲಾಧಿಕಾರಿಗಳ ಆದೇಶ ಜಾರಿಗೊಂಡಿದೆ. ಅನಧಿಕೃತ ಕಟ್ಟಡಗಳನ್ನು ಕೆಲ ಬಡಾವಣೆಗಳಲ್ಲಿ ನಿರ್ಮಿಸಿಕೊಂಡು ತೆರಿಗೆ ತುಂಬದೆ ನಾಗರಿಕ ಕಾಯ್ದೆ ಮೀರಲಾಗುತ್ತಿದೆ. ಸಾರ್ವಜನಿಕರು ನಿಯಮ ಉಲ್ಲಂಸಿದಲ್ಲಿ ದಂಡಕ್ಕೆ ಗುರಿಯಾಗಬೇಕಿದೆ ಎಂದು ಎಚ್ಚರಿಸಿದರು.
ರಾಜಕಾಲುವೆ ನೀರಿನ ತೊಂದರೆ ತಪ್ಪಿಸಿ: ಸದಸ್ಯ ಶಂಕರ ಕುಸಗೂರು ಮಾತನಾಡಿ, ಪಟ್ಟಣದಲ್ಲಿ ಈಗ 10 ಕೋ.ರೂ.ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದರೆ, ಆ ದೊಡ್ಡ ಪ್ರಮಾಣದ ನೀರು ಬಸನಕಟ್ಟೆಯ ಪಕ್ಕದಲ್ಲಿ ಹರಿಯಲು ಸಣ್ಣ ಕಾಲುವೆ ನಿರ್ಮಿಸಿದೆ. ಚರಂಡಿಯಲ್ಲಿ ಆ ಪ್ರಮಾಣದ ನೀರು ಹರಿಯಲು ಸಾಧ್ಯವೇ ? ಮಳೆಗಾಲ ಆರಂಭವಾಗುವ ಮುನ್ನ ಅಧಿಕಾರಿಗಳು, ಇಂಜಿನಿಯರ್ ಶಾಶ್ವ್ವತ ಪರಿಹಾರ ಕಂಡುಹಿಡಿಯುವಂತೆ ಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಸುಭಾಸ ಮಾಳಗಿ, ಮಳೆಗಾಲ ಆರಂಭವಾಗುತ್ತಿದ್ದಂತೆ ಇಸ್ಲಾಂಪುರ ಸೇರಿದಂತೆ ಕೆಲವೆಡೆ ನೀರು ನುಗ್ಗುತ್ತಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಪ್ರತಿವರ್ಷವೂ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ವಿಶೇಷ ಸಭೆ ಕರೆದು ಶಾಶ್ವ್ವತ ಪರಿಹಾರ ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಅವರಿಗೆ ಸರ್ಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿದ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಸಭೆಯಲ್ಲಿ ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಪುರಸಭೆ ಚೇರ್ಮನ್ ಚನ್ನವೀರಪ್ಪ ಶೆಟ್ಟರ, ಸದಸ್ಯರಾದ ಬಸವರಾಜ ಛತ್ರದ, ಶಿವಯೋಗಿ ಅಂಗಡಿ, ಮಂಗಳಾ ಗೆಜ್ಜೆಹಳ್ಳಿ, ಗಾಯತ್ರಿ ರಾಯ್ಕರ, ರಾಮಣ್ಣ ಕೋಡಿಹಳ್ಳಿ, ಕವಿತಾ ಸೊಪ್ಪಿನಮಠ, ಮಂಜುನಾಥ ಬಾರ್ಕಿ, ಜಮೀಲಾ ಹೆರಕಲ್, ಮಹಬೂಬ ಅಗಸನಹಳ್ಳಿ, ವಿನಯಕುಮಾರ ಹಿರೇಮಠ, ಸರೋಜಾ ಉಳ್ಳಾಗಡ್ಡಿ, ಹನುಮಂತಪ್ಪ ಮ್ಯಾಗೇರಿ, ಈರಣ್ಣ ಬಣಕಾರ, ಮಹಮದ್‌ರಫೀ ಮುದಗಲ್, ಕೀರವ್ವ ಚಲವಾದಿ, ಕಮಲವ್ವ ಕುರಕುಂದಿ, ರೇಷ್ಮಾ ಶೇಖ್, ರಾಜೇಸಾಬ ಕಳ್ಳಿಹಾಳ, ಸುಮಂಗಲಾ ರಾರಾವಿ, ಕೀರಪ್ಪ ಕರಡೇರ, ಸೋಮಣ್ಣ ಕರ್ಚಡ, ಸೋಮಶೇಖರ ಸಂಕಣ್ಣನವರ ಇದ್ದರು.