

ಪುತ್ತೂರು ಗ್ರಾಮಾಂತರ: ಕಳೆದ ಭಾನುವಾರ ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಬಿರುಗಾಳಿ ಬೀಸಿ ಹಲವಾರು ಮರಗಳು ಧರಾಶಾಯಿಯಾಗಿದ್ದವು. ಅಪಾಯಕಾರಿ ಸ್ಥಿತಿಯಲ್ಲಿ ಉಳಿದುಕೊಂಡಿದ್ದ ಮರಗಳ ತೆರವು ಕಾರ್ಯಾಚರಣೆ ಬುಧವಾರ ಅರಣ್ಯ ಇಲಾಖೆ ಮೂಲಕ ನಡೆದಿದೆ.
ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಭಾನುವಾರ ಬೀಸಿದ ಬಿರುಗಾಳಿಯಿಂದಾಗಿ ಕೌಡಿಚ್ಚಾರು ಜಂಕ್ಷನ್ ಸಮೀಪದ ಕೋಳಿಫಾರ್ಮ್ ಬಳಿ ರಸ್ತೆ ಬದಿಯಲ್ಲಿದ್ದ ಮರವೊಂದು ಉರುಳಿಬಿದ್ದಿತ್ತು. ಅಲ್ಲಿದ್ದ ಮತ್ತೊಂದು ಮರ ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಅರಿಯಡ್ಕ ಗ್ರಾಪಂ ಮನವಿ ಮೇರೆಗೆ ಅರಣ್ಯ ಇಲಾಖೆ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರ ಸೇರಿದಂತೆ ಕೌಡಿಚ್ಚಾರು ವ್ಯಾಪ್ತಿಯಲ್ಲಿದ್ದ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಪಾಣಾಜೆ ಉಪವಲಯ ಅರಣ್ಯಾಧಿಕಾರಿ ಮದನ್ ಬಿ.ಕೆ ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕ ನಿಂಗರಾಜು, ಅರಣ್ಯ ರಕ್ಷಕ ದೇವಪ್ಪ ನಾಯ್ಕ ತಂಡದಿಂದ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆ ನಡೆದಿದೆ. ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಲತಾ ಮರತ್ತಮೂಲೆ, ಅರಿಯಡ್ಕ ಗ್ರಾಮ ಆಡಳಿತಾಧಿಕಾರಿ ಗೋಪಿಲಾಲ್, ಗ್ರಾಮ ಸಹಾಯಕ ಇಸ್ಮಾಯಲ್ ಮತ್ತಿತರರು ಉಪಸ್ಥಿತರಿದ್ದರು.
ಬಿರುಗಾಳಿ ಬೀಸಿದ ವೇಳೆ ಕೌಡಿಚ್ಚಾರು ಸಿಆರ್‌ಸಿ ಕಾಲನಿಯಲ್ಲಿ ಮರಗಳು ಕೆಎಫ್‌ಡಿಸಿಗೆ ಸೇರಿದ ಎರಡು ಮನೆಗಳ ಮೇಲೆ ಉರುಳಿ ಬಿದ್ದಿದ್ದವು. ನಿಗಮದ ನಿವೃತ್ತಿಗೊಂಡಿದ್ದ ಕಾರ್ಮಿಕ ಹಾಗೂ ಕೆಲಸದಿಂದ ವಜಾಗೊಂಡಿದ್ದ ಕಾರ್ಮಿಕೆಯೊಬ್ಬರ ಕುಟುಂಬ ಆ ಮನೆಗಳಲ್ಲಿ ವಾಸ್ತವ್ಯವಿದ್ದ ಹಿನ್ನಲೆಯಲ್ಲಿ ನಿಗಮದವರು ಮನೆಯ ಮೇಲೆ ಮುರಿದು ಬಿದ್ದಿದ್ದ ಮರಗಳ ತೆರವು ಕಾರ್ಯಕ್ಕೆ ಮುಂದಾಗಿರಲಿಲ್ಲ ಎಂದು ತಿಳಿದು ಬಂದಿದೆ. ಅರಿಯಡ್ಕ ಗ್ರಾಪಂ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಮನೆಗಳ ಮೇಲೆ ಉರುಳಿ ಬಿದ್ದಿದ್ದ ಮರ ತೆರವು ಮಾಡಿದ್ದಾರೆ.