ಹೆದ್ದಾರಿ ಬದಿಯ ಕಟ್ಟಡಗಳ ತೆರವು ಕಾರ್ಯ

building
ಜಂಕ್ಷನ್ ಅಭಿವೃದ್ಧಿಗಾಗಿ ಕಟ್ಟಡಗಳನ್ನು ತೆರವು ಮಾಡಲಾಗಿರುವುದು.
Published on

ಕುಂದಾಪುರ: ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕೊನೆಗೂ ಸರ್ಕಲ್ ಅಭಿವೃದ್ಧಿಪಡಿಸಲು ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಪೂರ್ವಭಾವಿಯಾಗಿ ಮುಳ್ಳಿಕಟ್ಟೆ ಹೆದ್ದಾರಿ ಬದಿಯಲ್ಲಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಅವೈಜ್ಞಾನಿಕವಾಗಿರುವ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತ ವಲಯವಾಗಿ ಮಾರ್ಪಟ್ಟಿತ್ತು. ಇಲ್ಲಿ ಸುಗಮ ವಾಹನಗಳ ಸಂಚಾರಕ್ಕಾಗಿ ಸೂಕ್ತ ಸರ್ಕಲ್ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಅದರಂತೆ ಈಗ ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನದಿಂದಾಗಿ ಹೆದ್ದಾರಿ ಪ್ರಾಧಿಕಾರದವರು ಪರಿಶೀಲಿಸಿ, ಜಂಕ್ಷನ್ ಅಭಿವೃದ್ಧಿಗೆ ಒಪ್ಪಿಗೆ ನೀಡಿದ್ದಾರೆ.

ಮುಳ್ಳಿಕಟ್ಟೆಯಲ್ಲಿ ತಲ್ಲೂರಿನಲ್ಲಿ ಇರುವಂತೆ ಸರ್ಕಲ್ ಅಭಿವೃದ್ಧ್ದಿಯಾಗಲಿದೆ. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಅಗತ್ಯವಿರುವ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ಹಳೇ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದೆ.ಈ ಹೆದ್ದಾರಿಯ ಕಾಮಗಾರಿ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿಯವವರು ವೃತ್ತ ನಿರ್ಮಾಣ ಮಾಡಲಿದ್ದಾರೆ.

ಜಂಕ್ಷನ್ ಅಭಿವೃದ್ಧಿಯೊಂದಿಗೆ ಅರಾಟೆಯಿಂದ ಮುಳ್ಳಿಕಟ್ಟೆ ಹಾಗೂ ಮುಳ್ಳಿಕಟ್ಟೆಯಿಂದ ಮೊವಾಡಿಯವರೆಗೆ ಇಕ್ಕೆಲಗಳಲ್ಲೂ ಸರ್ವಿಸ್ ರಸ್ತೆ ಬೇಕೆಂಬುದು ಜನರ ಬಹು ವರ್ಷಗಳ ಬೇಡಿಕೆ. ಈ ವರ್ಷದ ಮಳೆಗಾಲದೊಳಗೆ ಜಂಕ್ಷನ್ ಅಭಿವೃದ್ಧಿ ಹಾಗೂ ಸರ್ವಿಸ್ ರಸ್ತೆಗಳು, ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಳ್ಳಿಕಟ್ಟೆಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅಲ್ಲಿನ ಜನರ ಬೇಡಿಕೆಯಂತೆ ಸರ್ಕಲ್ ಅಭಿವೃದ್ಧಿಯಾಗಲಿದೆ. ತಲ್ಲೂರು, ಹೆಮ್ಮಾಡಿ, ತ್ರಾಸಿ, ಯಡ್ತರೆ ಬೈಪಾಸ್‌ನಲ್ಲಿ ಅಂಡರ್‌ಪಾಸ್ ಹಾಗೂ ಮುಳ್ಳಿಕಟ್ಟೆಯಲ್ಲಿ ಸರ್ಕಲ್ ಅಭಿವೃದ್ಧಿಗೆ ಒಟ್ಟು 170 ಕೋಟಿ ರೂ. ಮಂಜೂರಾಗಿದ್ದು, ಡಿಪಿಆರ್‌ಗೆ ಟೆಂಡರ್ ಕರೆಯಲಾಗಿದೆ. ಶೀಘ್ರ ಆ ಪ್ರಕ್ರಿಯೆ ಆಗಲಿದೆ. ಬಿ.ವೈ.ರಾಘವೇಂದ್ರ, ಸಂಸದ https://www.vijayavani.net/party-organization-work-in-villages https://www.vijayavani.net/new-idol-of-kala-rahu-installed-at-kabbinale-temple

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net