ಚಾಮುಂಡಿಬೆಟ್ಟದಲ್ಲಿ ಅನಧಿಕೃತ ವ್ಯಕ್ತಿಗಳನ್ನು ತೆರವುಗೊಳಿಸಿ : ಸರ್ಕಾರವನ್ನು ಒತ್ತಾಯಿಸಿದ ಪ್ರತಾಪ್ ಸಿಂಹ

pratap simha
Published on

ಮೈಸೂರು: ಚಾಮುಂಡಿಬೆಟ್ಟದ ಪಾವಿತ್ರೃತೆ ಉಳಿಸಲು ಹೊರ ಜಿಲ್ಲೆಯಿಂದ ಆಗಮಿಸಿ ಬೆಟ್ಟದಲ್ಲಿ ಜಾಗ ಖರೀದಿಸಿರುವವರನ್ನು ತೆರವುಗೊಳಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟದ ಮೂಲನಿವಾಸಿಗಳು ಅಲ್ಲಿಯೇ ಇರಲಿ. ಆದರೆ, ಹೊರಗಿನಿಂದ ಬಂದವರನ್ನು ತೆರವುಗೊಳಿಸುವ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಸ್ವಾಗತಾರ್ಹ. ಬೆಟ್ಟದಲ್ಲಿ ಹೊರಗಿನವರು ಖರೀದಿಸಿರುವ ಜಾಗವನ್ನು ಪ್ರಾಧಿಕಾರ ಖರೀದಿಸಿ ಆ ಜಾಗವನ್ನು ಪ್ರಾಧಿಕಾರದ ವಶದಲ್ಲಿ ಇಟ್ಟುಕೊಳ್ಳಬೇಕು. ಅದೇ ರೀತಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ 45 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ಹುಂಡಿ ಹಣ 130 ಕೋಟಿ ರೂ. ಇರುವ ಹಿನ್ನೆಲೆಯಲ್ಲಿ ಬೆಟ್ಟದ ಅಭಿವೃದ್ಧಿಗೆ ಅನುದಾನದ ಅವಶ್ಯಕತೆ ಇಲ್ಲ. ಹಾಗಾಗಿ ಬೆಟ್ಟದ ಪಾವಿತ್ರೃತೆ ಉಳಿಸಲು ಬೆಟ್ಟಕ್ಕೆ ಸಂಬಂಧಪಡದವರನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು. ಆ ಮೂಲಕ ಬೆಟ್ಟದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು. ಬೆಟ್ಟದಿಂದ ತೆರವುಗೊಳ್ಳಲು ಇಚ್ಛಿಸುವವರಿಗೋಸ್ಕರ ಪ್ರತ್ಯೇಕ ಬಡಾವಣೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಯೋಜನೆ ಕಾರ್ಯಗತಗೊ ಂಡಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದರೂ ಈ ಯೋಜನೆ ಜಾರಿಯಾಗಲಿ ಎಂದರು.

ಬಹಳ ವರ್ಷಗಳಿಂದ ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಈಗಿನ ಸರ್ಕಾರವಾದರೂ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಹೇಳಿದರು.

ಈ ಬಾರಿ ಮುಂಗಾರು ದುರ್ಬಲಗೊಂಡಿದೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಬಾರಿಯೂ ಈ ಎರಡು ತಿಂಗಳಿನಲ್ಲಿ ಮಳೆ ಸುರಿಯುವ ವಿಶ್ವಾಸ ಇದೆ. ಉತ್ತಮ ಮಳೆಯಾಗಲಿ ಎಂದು ಕಾವೇರಿ ಮಾತೆ ಹಾಗೂ ಇಗ್ಗುತಪ್ಪ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಳೆಯ ಕೊರತೆ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆಯ ಹಾದಿ ತುಳಿಯಬಾರದು ಎಂದು ರೈತರಲ್ಲಿ ಮನವಿ ಮಾಡಿದರು.

ನಗರದಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮೋದನೆ ಬೇಕಾಗಿದೆ. ಕಬಿನಿ ಎರಡನೇ ಹಂತದ ಯೋಜನೆಗೂ ಕ್ಯಾಬಿನೆಟ್ ಅನುಮೋದನೆ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದರು.

ರಾಜಕೀಯ ಹೇಳಿಕೆಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ, ಜನರ ಒಳಿತಿಗೋಸ್ಕರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಡೆಗೆ ಮಾತ್ರ ನಾನು ಗಮನ ಹರಿಸುತ್ತಿದ್ದೇನೆ. ಹಾಗಾಗಿ ರಾಜಕೀಯ ಕುರಿತು ಹೇಳಿಕೆ ನೀಡಲು ಬಯಸುವುದಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭ 5 ತಿಂಗಳು ಸಮಯವನ್ನು ಕ್ರಿಮಿನಲ್‌ಆಗಿ ವೇಸ್ಟ್ ಮಾಡಿದ್ದೇನೆ, ಇನ್ನು ಮುಂದೆ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ, ಜನರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net