

ಸಿದ್ದಾಪುರ: ಸಿದ್ದಾಪುರದಿಂದ ಮಾಲ್ದಾರೆ ಹಾಗೂ ಪಾಲಿಬೆಟ್ಟಕ್ಕೆ ತೆರಳುವ ಮುಖ್ಯರಸ್ತೆಯಾದ ಕೆಸುವಿನ ಹಳ್ಳ ತಿರುವಿನಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರೇ ರಸ್ತೆ ಹೂಳೆತ್ತುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಳೆ ನೀರಿನಲ್ಲಿ ಕೊಚ್ಚಿ ಬಂದು ರಸ್ತೆಯಲ್ಲಿ ಮಣ್ಣು ಶೇಖರಣೆಯಾಗಿತ್ತು. ಇದನ್ನು ತೆರವುಗೊಳುಸುವಂತೆ ಸ್ಥಳೀಯ ಯುವಕರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು. ಆದರೆ ಗ್ರಾಪಂ ನಿರ್ಲಕ್ಷ್ಯ ಧೋರಣೆ ತೋರಿತ್ತು. ಇದರಿಂದ ಬೇಸತ್ತ ಯುವಕರು ಕಾರ್ಮಿಕರಿಗೆ ತಮ್ಮ ಸ್ವಂತ ಹಣದಿಂದ ಕೂಲಿಸ ನೀಡುವ ಮೂಲಕ ಮಣ್ಣು ತೆರವುಗೊಳಿಸಿದ್ದಾರೆ.
ಈ ಪ್ರದೇಶದಲ್ಲಿ ಈ ಹಿಂದೆ ಹಲವು ಅಪಘಾತಗಳು ಘಟಿಸಿ ಸಾವು-ನೋವು ಸಂಭವಿಸಿತ್ತು. ಯುವಕರು ಮುಂಜಾಗ್ರತೆಯಿಂದ ಮಣ್ಣು ತೆರವು ಗೊಳಿಸಿದ್ದರಿಂದ ಮುಂದಾಗಬಹುದಾದ ಅಪಾಯ ತಪ್ಪಿದಂತಾಗಿದೆ. ಸ್ಥಳೀಯರಾದ ಶೇಖರ್, ಸಂಪತ್ತು, ಶಶಿ, ಮುಂತಾದವರು ಹಾಜರಿದ್ದರು.