ರಸ್ತೆಗೆ ಹಾಕಿರುವ ಬೇಲಿ ತೆರವುಗೊಳಿಸಿ

3blrp2
Published on

ಬೇಲೂರು: ಸಾರ್ವಜನಿಕರು ಸಂಚರಿಸುತ್ತಿದ್ದ ರಸ್ತೆಗೆ ವ್ಯಕ್ತಿಯೊಬ್ಬರು ಬೇಲಿ ಹಾಕಿರುವುದರಿಂದ ಸಂಚರಿಸಲು ಸಮಸ್ಯೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಬೇಲಿ ತೆರವುಗೊಳಿಸುವಂತೆ ಪಟ್ಟಣದ ಬಿಕ್ಕೋಡು ರಸ್ತೆಯ ದೀನ್ ದಯಾಳ್ ಉಪಾಧ್ಯಾಯ ಬಡಾವಣೆ ನಿವಾಸಿಗಳು ಬುಧವಾರ ಆಗ್ರಹಿಸಿದ್ದಾರೆ.


ಬೇಲಿ ತೆರವುಗೊಳಿಸುವಂತೆ ಆಗ್ರಹಿಸಲು ಬುಧವಾರ ಜಮಾಯಿಸಿದ್ದ ಬಡಾವಣೆ ನಿವಾಸಿಗಳು, ರಸ್ತೆಗೆ ಬೇಲಿ ಹಾಕಿರುವುದರಿಂದ ತಮಗಾಗುತ್ತಿರುವ ತೊಂದರೆ ವಿವರಿಸಿದರು.


ಬಡಾವಣೆ ನಿವಾಸಿ ಗಿರೀಶ್ ಮಾತನಾಡಿ, ಇಲ್ಲಿನ ರಸ್ತೆ ನಕಾಶೆಯಲ್ಲಿದ್ದು ಇನ್ನೂ ಸರಿಪಡಿಸಿಲ್ಲ. ಪುರಸಭೆಯವರನ್ನು ಕೇಳಿದರೆ ಈ ಜಾಗ ಖಾಸಗಿ ವ್ಯಕ್ತಿಗೆ ಸೇರಿದೆ ಎಂದು ಹಿಂಬರಹ ಕೊಟ್ಟಿದ್ದಾರೆ. ಲೇಔಟ್ ಪ್ಲಾೃನ್‌ನಲ್ಲಿ ರಸ್ತೆ ಅಂತ ಇದೆ. ಇದೇ ರಸ್ತೆಯಲ್ಲಿ ಕಳೆದ ಮೂರು ವರ್ಷದಿಂದ ಸಂಚರಿಸುತ್ತಿದ್ದೇವೆ. ಆದರೆ ಈಗ ಏಕಾಏಕಿ ಬೇಲಿ ಹಾಕಿದ್ದಾರೆ. ಬೇಲಿಯನ್ನು ತೆರವುಗೊಳಿಸಬೇಕೆಂದು ಪುರಸಭೆ ಹಾಗೂ ಶಾಸಕರಿಗೂ ತಿಳಿಸಿದರೂ ಗಮನ ಹರಿಸುತ್ತಿಲ್ಲ. ತಹಸೀಲ್ದಾರ್ ಅವರನ್ನು ಕೇಳಿದರೆ ಇದು ನಮಗೆ ಬರುವುದಿಲ್ಲ, ಪುರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದವರನ್ನು ಕೇಳಿ ಎನ್ನುತ್ತಾರೆ. ಹೀಗಾದರೆ ನಾವು ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದರು.


ಇಲ್ಲಿನವರು ಸಂಚರಿಸಲು ರಸ್ತೆ ಬೇಕು. ಅಲ್ಲದೆ ಇಲ್ಲಿ ಮನೆಗಳನ್ನು ಕಟ್ಟಲು ಪುರಸಭೆಯಿಂದ ಅನುಮತಿ ನಿಡುತಿದ್ದಾರೆ. ಆದರೆ ರಸ್ತೆ ಬಿಡಿಸಿ ಎಂದರೆ ಹಿಂಬರಹ ಕೊಡುತ್ತಿರುವುದಾದರೂ ಏಕೆ? ಅರ್ಥವಾಗುತ್ತಿಲ್ಲ. ಈ ವಿಚಾರವಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದಾಗ ತಹಸೀಲ್ದಾರ್‌ಗೆ ಹೇಳಿ ಒಬ್ಬ ಸರ್ವೇಯವರನ್ನು ಕಳುಹಿಸಿದರು. ಅವರು ಬಂದು ಇಲ್ಲಿನ ಲೇಔಟ್ ಪ್ಲಾೃನ್ ತಪ್ಪಿದೆ ಎಂದು ಹೇಳಿ ಹೋದವರು ಪುನಃ ಬಂದು ಸರಿಪಡಿಸಿಲ್ಲವಾದ್ದರಿಂದ ದಿನದಿಂದ ದಿನಕ್ಕೆ ರಸ್ತೆ ಸಮಸ್ಯೆ ಕಾಡುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇತ್ತ ಗಮನಹರಿಸಿ ರಸ್ತೆ ಬಿಡಿಸಿಕೊಡಬೇಕೆಂದು ಆಗ್ರಹಿಸಿದರು.
ಬಡಾವಣೆ ನಿವಾಸಿಗರಾದ ಪ್ರಸನ್ನ, ಮೋಹನ್ ಕುಮಾರ್, ದಾಸಪ್ಪ, ಭಾಗ್ಯಮ್ಮ, ಮೈತ್ರಿ, ಪುಷ್ಪಾ, ಗೌರಮ್ಮ, ಮಂಜುಳಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net