ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

2
ಕೆಜಿಎಫ್​ ತಾಲೂಕು ಬೇತಮಂಗಲದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಶಾಸಕಿ ರೂಪಕಲಾ ಉದ್ಘಾಟಿಸಿದರು. ತಹಸೀಲ್ದಾರ್​ ನಾಗವೇಣಿ, ಇಒ ವೆಂಕಟೇಶಪ್ಪ, ಸಿಡಿಪಿಒ ರಾಜೇಶ್​, ನೀರು ಸರಬರಾಜು ಎಇಇ ಶಿವಕುಮಾರ್​, ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವರ್ಣಶ್ರೀ, ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್​ ಇದ್ದರು.
Published on

ಅಧಿಕಾರಿಗಳಿಗೆ ಶಾಸಕಿ ರೂಪಕಲಾ ಸೂಚನೆ - ನೀರು ಪೂರೈಕೆಯಲ್ಲಿ ಸಮಸ್ಯೆ ಆಗದಿರಲಿ

ಬೇತಮಂಗಲ: ನೀರು ಸರಬರಾಜು ತ್ರಿವಳಿ ಒಪ್ಪಂದ, ರಾಜಕಾಲುವೆ ಒತ್ತುವರಿ ತೆರವು, ವಸತಿ ರಹಿತರಿಗೆ ನಿವೇಶನ, ಸೇರಿ ಹತ್ತಾರು ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕಿ ರೂಪಕಲಾ ಅಧಿಕಾರಿಗಳಿಗೆ ಸೂಚಿಸಿದರು.

ಬೇತಮಂಗಲ ಗ್ರಾಪಂ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನ ನಮ್ಮ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇತಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಒಪ್ಪಂದ, ಗೊಸಿನ ಕೆರೆಯಿಂದ ವಿ.ಕೋಟೆ ರಸ್ತೆವರೆಗೂ ಬೃಹತ್​ ರಾಜಕಾಲುವೆ ಒತ್ತುವರಿ ತೆರವು, ವಸತಿ ರಹಿತರಿಗೆ ಸರ್ಕಾರಿ ನಿವೇಶನ, ನೂತನ ಶೌಚಗೃಹ, ಆಟೋ ನಿಲ್ದಾಣ ಸೇರಿ ಹಲವು ಸಮಸ್ಯೆಗಳಿಗೆ ಮುಕ್ತಿ ನೀಡುವ ಪ್ರಯತ್ನ ಮಾಡಲಾಗುವುದು ಎಂದರು. ಸಭೆಯಲ್ಲಿ ಪ್ರಾರಂಭದಲ್ಲೇ ಪ್ರಾರಂಭವಾದ ಪಂಚಾಯಿತಿ ಮತ್ತು ನೀರು ಸರಬರಾಜು ಮಂಡಳಿ ಜಟಾಪಟಿ ನಡುವೆ ಸಲಹೆ ನೀಡಿದ ಶಾಸಕರು, ಗ್ರಾಮ ಪಂಚಾಯಿತಿ ಮತ್ತು ನೀರು ಸರಬರಾಜು ಮಂಡಳಿ ಪ್ರತ್ಯೇಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು ಮತ್ತು ಮುಂದಿನ ದಿನಗಳಲ್ಲಿ ಜಲಜೀವನ್​ ಅಡಿ ನೀರು ಸರಬರಾಜು ಮಾಡುವ ಹಿನ್ನೆಲೆಯಲ್ಲಿ ಮೂರು ಸಂಸ್ಥೆಗಳ ಮುಖ್ಯಸ್ಥರು ಅಥವಾ ಸಮಿತಿಗಳ ಸದಸ್ಯರ ತ್ರಿವಳಿ ಸಮಿತಿ ಸಭೆ ನಡೆಸಿ ಮೂವರು ಪ್ರದೇಶಗಳನ್ನು ವಿಂಗಡಣೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ನೀರು ಸರಬರಾಜು ಮಾಡುವುದರ ಜತೆಗೆ ಸರಬರಾಜು ಮಾಡುವ ಭಾಗಗಳಲ್ಲಿ ಕಂದಾಯ ವಸೂಲಿ ಮಾಡಿಕೊಳ್ಳುವಂತಹ ಒಪ್ಪಂದ ಮಾಡಿಕೊಳ್ಳುವಂತೆ ಸೂಚಿಸಿದರು.

ಸುಮಾರು 15 ಸಾವಿರ ಜನಸಂಖ್ಯೆ ಇರುವ ಹಾಗೂ ನಿತ್ಯ ಸಾವಿರಾರು ಮಂದಿ ವಿವಿಧ ಕೆಲಸ ಕಾರ್ಯಗಳಿಗಾಗಿ ಬೇತಮಂಗಲಕ್ಕೆ ಬರುತ್ತಾರೆ. ಆದರೆ ಒಂದೇ ಒಂದು ಸಾರ್ವಜನಿಕ ಶೌಚಗೃಹ ಇದ್ದು, ಅದೂ ಉಪಯೋಗಿಸಲು ಯೋಗ್ಯವಿಲ್ಲದಂತಹ ಸ್ಥಿತಿ ತಲುಪಿರುವ ಬಗ್ಗೆ ಸಾರ್ವಜನಿಕರು ತಿಳಿಸಿದಾಗ ಆದಷ್ಟು ಬೇಗ ಮತ್ತೊಂದು ಶೌಚಗೃಹ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಿಮಾರ್ಣ ಮಾಡುವ ಬಗ್ಗೆ ಭರವಸೆ ನೀಡಿದರು.

ಪಟ್ಟಣದಲ್ಲಿ ಬೆಳಗ್ಗೆ 5 ಗಂಟೆಗೆ ಮದ್ಯದ ಅಂಗಡಿ ತೆಗೆಯುತ್ತಾರೆ. ಅದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಸಭೆಯಲ್ಲಿ ದೂರು ಬಂದ ಹಿನ್ನೆಲೆಯಲ್ಲಿ, ಬೆಳ್ಳಂಬೆಳಗ್ಗೆ ಯಾವುದಾದರೂ ಮದ್ಯದಂಗಡಿ ತೆರೆದರೆ ಅದಕ್ಕೆ ಸಾಮಾಜಿಕ ಕಳಕಳಿ ಇರುವವರು ಅಥವಾ ಸಾರ್ವಜನಿಕರೇ ಅದಕ್ಕೆ ಬೀಗ ಜಡಿದು ಪೊಲೀಸರಿಗೆ ಅಥವಾ ಅಬಕಾರಿ ಇಲಾಖೆಗೆ ಮಾಹಿತಿ ನೀಡಿ ಎಂದರು.

ಪಂಚಾಯಿತಿಯಿಂದ ಕಂದಾಯ ವಸೂಲಿ ಹೆಚ್ಚಿಗೆ ಮಾಡುವುದು. ಎಲ್ಲ ವಾರ್ಡ್​ಗಳಿಗೂ ಯಾವುದೇ ತಾರತಮ್ಯವಿಲ್ಲದೆ ನೀರು ಬಿಡುವುದು ಮತ್ತು ಸರ್ಕಾರಿ ಯೋಜನೆಗಳನ್ನು ಸಂಬಂಧಪಟ್ಟ ಅರ್ಹ ಲಾನುಭವಿಗಳಿಗೆ ತಲುಪಿಸುವಂತೆ ಸೂಚಿಸಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಲಮೇಲಮ್ಮ, ಪಿಡಿಒ ಮಂಜುನಾಥ್​, ಕೆಪಿಸಿಸಿ ಸದಸ್ಯ ದುರ್ಗಾ ಪ್ರಸಾದ್​, ಜಿಪಂ ಮಾಜಿ ಸದಸ್ಯ ಅಮು ಲಕ್ಷಿ$್ಮನಾರಾಯಣ, ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಮಮತಾ ಗಣೇಶ್​, ಕಿರಣ್​ ಕುಮಾರ್​, ಇನಾಯತುಲ್ಲಾ ಷರೀಫ್​, ರಾಧಮ್ಮ ಇದ್ದರು.

ನಿವೇಶನ ರಹಿತರಿಗೆ ನಿವೇಶನ: ಸಾರ್ವಜನಿಕರಿಂದ ಬಂದ ದೂರುಗಳಲ್ಲಿ ಪ್ರಮುಖ ಸಮಸ್ಯೆಯಾದ ರಾಜಕಾಲುವೆ ಒತ್ತುವರಿಯನ್ನು ಒಂದು ವಾರದ ಒಳಗೆ ತೆರವು ಮಾಡುವಂತೆ ತಹಸೀಲ್ದಾರ್​ ನಾಗವೇಣಿ ಅವರಿಗೆ ಸೂಚಿಸಿದರು. ಆ ಮೂಲಕ ಹನುಮಂತನಗರ ಮತ್ತು ಬೇತಮಂಗಲ ಕ್ಯಾಸಂಬಳ್ಳಿ ರಸ್ತೆಯ ನೂರಾರು ಮನೆಗಳಿಗೆ ನೀರು ನುಗ್ಗುವ ಸಮಸ್ಯೆಗೆ ಪರಿಹಾರ ಸೂಚಿಸಿದರು. ಸಾಕಷ್ಟು ಮಂದಿಗೆ ನಿವೇಶನ ಇಲ್ಲದೇ ಇರುವುದರಿಂದ ಸರ್ಕಾರಿ ಜಮೀನನ್ನು ಗುರುತಿಸಲಾಗಿದ್ದು, ಪಂಚಾಯಿತಿ ಗ್ರಾಮಸಭೆ ಮೂಲಕ ಆಯ್ಕೆ ಮಾಡಿ ವಿತರಿಸುವುದಾಗಿ ಶಾಸಕಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net