ಬಂಕಾಪುರ ಚೌಕ-ಚನ್ನಮ್ಮ ಸರ್ಕಲ್ ಅತಿಕ್ರಮಣ ತೆರವುಗೊಳಿಸಿ

lingaraj patil
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳೊಂದಿಗೆ ಹಳೇ ಹುಬ್ಬಳ್ಳಿ ಭಾಗದಲ್ಲಿ ಪಾದಯಾತ್ರೆ ನಡೆಸಿ ಅಲ್ಲಿನ ಅತಿಕ್ರಮಣ ತೆರವು ಹಾಗೂ ರಸ್ತೆ ಸುಧಾರಣೆ ಬಗ್ಗೆ ರ್ಚಚಿಸಿರುವುದು ಶ್ಲಾಘನೀಯ. ಅದೇ ರೀತಿ ಅವರು, ನಗರದ ಬಂಕಾಪುರ ಚೌಕನಿಂದ ಚನ್ನಮ್ಮ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಧಾರವಾಡ ವಿಭಾಗದ ಪ್ರಭಾರಿ ಲಿಂಗರಾಜ ಪಾಟೀಲ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹುಬ್ಬಳ್ಳಿಗೆ ಬಾಟಲ್ ನೆಕ್ ಆಗಿರುವ ಬಂಕಾಪುರ ಚೌಕ-ಚನ್ನಮ್ಮ ವೃತ್ತದವರೆಗಿನ ರಸ್ತೆಯ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಶಾಸಕರ ಗಮನಕ್ಕೆ ಇಲ್ಲವೇ? ಈ ಮಾರ್ಗದಲ್ಲಿ ಆಗಿರುವ ರಸ್ತೆ ಅತಿಕ್ರಮಣ ಕಾಣುತ್ತಿಲ್ಲವೇ? ಹುಬ್ಬಳ್ಳಿಗೆ ಪ್ರವೇಶಿಸುವ ಎಲ್ಲ ರಸ್ತೆಗಳು ಚತುಷ್ಪಥ ರಸ್ತೆಗಳಾಗಿ ಅಭಿವೃದ್ಧಿ ಹೊಂದಿವೆ. ಆದರೆ ಬಂಕಾಪುರ ಚೌಕ-ಚನ್ನಮ್ಮ ಸರ್ಕಲ್ ರಸ್ತೆ ಚತುಷ್ಪಥ ರಸ್ತೆ ಆಗಿಲ್ಲದಿರುವುದು ದುರದೃಷ್ಟಕರ ಹಾಗೂ ಹುಬ್ಬಳ್ಳಿ ಮಹಾನಗರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದ್ದಾರೆ.

ಹಿಂದೆ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಮಣಿವಣ್ಣನ್ ಅವಳಿ ನಗರದಲ್ಲಿ ರಸ್ತೆ ಅಗಲೀಕರಣ ಹಾಗೂ ಅತಿಕ್ರಮಣ ತೆರವಿಗೆ ಕಾರ್ಯಾಚರಣೆ ನಡೆಸಿದ್ದರು. ಆದರೆ, ಅವರಿಗೆ ಚನ್ನಮ್ಮ ಸರ್ಕಲ್-ಬಂಕಾಪುರ ಚೌಕ ವರೆಗಿನ ರಸ್ತೆಯ ಮೇಲಿನ ಅತಿಕ್ರಮಣಗಳನ್ನು ತೆಗೆಯಲು ಬಿಡದವರು ಯಾರು ? ಹುಬ್ಬಳ್ಳಿ ಸ್ಟೇಷನ್ ರಸ್ತೆಯಿಂದ ದುರ್ಗದಬೈಲ ವರೆಗಿನ ಅತಿಕ್ರಮಣವಾದ ಶಹಬಜಾರ್ ಶಾಸಕರಿಗೆ ಕಾಣುತ್ತಿಲ್ಲವೇ ? ಇಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಟ್ರಾಫಿಕ್ ಕಿರಿಕಿರಿ ಹಾಗೂ ಫುಟ್​ಪಾತ್ ಮೇಲಿನ ಅನಧೀಕೃತ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂಬ ಪರಿಜ್ಞಾನ ಶಾಸಕರಿಗೆ ಇಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಅತಿ ಹೆಚ್ಚು ಅತಿಕ್ರಮಣ ಹಾಗೂ ಟ್ರಾಫಿಕ್ ಕಿರಿಕಿರಿ ಇರುವುದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ. ಅವರು ಕ್ಷೇತ್ರದ ಎಲ್ಲ ರಸ್ತೆಗಳ ಅಗಲೀಕರಣ ಹಾಗೂ ಅತಿಕ್ರಮಣ ತೆರವುಗೊಳಿಸಲು ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net