

ದಾಂಡೇಲಿ: ನಗರದಲ್ಲಿ ಯಾವುದೇ ಅತಿಕ್ರಮಣ ಇದ್ದರೂ ತೆರವುಗೊಳಿಸಬೇಕು. ವ್ಯಕ್ತಿ ಎಷ್ಟೇ ಪ್ರಭಾವ ಶಾಲಿಯಾದರೂ ಭಯ ಪಡದೇ ಅಂಥವರ ಅತಿಕ್ರಮಣ ತೆರವಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ಆಶ್ರಯ ಯೋಜನೆಯ ಮನೆಗಳ ಹಂಚಿಕೆ ಕುರಿತು ಗುರುವಾರ ನಗರಸಭೆಯಲ್ಲಿ ಏರ್ಪಡಿಸಿದ್ದ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಗರಸಭೆಯ ಆಸ್ತಿಯ ಖಾಲಿ ಜಾಗ ರಕ್ಷಿಸಬೇಕು. ಅಂತಹ ಜಾಗಕ್ಕೆ ಪೆನ್ಸಿಂಗ್ ಮೂಲಕ ನಗರಸಭೆಯ ಆಸ್ತಿ ಎಂದು ಸೂಚನಾ ಫಲಕ ಅಳವಡಿಸಿ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಸ್ಥಳದಲ್ಲಿದ್ದ ಪೌರಾಯುಕ್ತ ರಾಜಾರಾಂ ಪವಾರ ಅವರಿಗೆ ಸೂಚನೆ ನೀಡಿದರು.
ದಾಂಡೇಲಿಯಲ್ಲಿ ರಾಜೀವಗಾಂಧಿ ಮತ್ತು ವಾಜಪೇಯಿ ಯೋಜನೆ ಅಡಿ 400 ಮನೆಗಳ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ಸ್ವಂತ ಜಾಗ ಹೊಂದಿದ ಪ.ಜಾತಿ, ಪ.ಪಂಗಡ, ಅಲ್ಪಸಂಖ್ಯಾತರು, ಸಾಮಾನ್ಯರು ಈ ಯೋಜನೆ ಅಡಿ ಅರ್ಜಿ ಸಲ್ಲಿಸಬಹುದಾಗಿದೆ. ಪ.ಜಾತಿ, ಪ.ಪಂಗಡದವರಿಗೆ ಮನೆಯ ನಿರ್ಮಾಣದ 4 ಹಂತಗಳನ್ನು ಪರಿಶೀಲಿಸಿ 2 ಲಕ್ಷ ರೂ. ಅನುದಾನ ಹಾಗೂ ಅಲ್ಪಸಂಖ್ಯಾತ ಮತ್ತು ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂ. ಅನುದಾನ ದೊರಕಲಿದೆ ಎಂದರು.
ಜಿ+2ದ 1100 ಮನೆಗಳು ನಿರ್ಮಾಣಗೊಂಡಿದ್ದು, 821 ಫಲಾನುಭವಿಗಳು ಸಂದಾಯ ಮಾಡಬೇಕಾದ ಹಣವನ್ನು ತುಂಬಿದ್ದಾರೆ. ಉಳಿದ ಫಲಾನುಭವಿಗಳು ಬಾಕಿ ಇರುವ ಕಂತುಗಳನ್ನು ತುಂಬುತ್ತಿದ್ದಾರೆ ಎಂದರು.
ಅಂಬೇವಾಡಿಯ ಕೆ.ಪಿ.ಸಿ ಮನೆಗಳು ಹಾಳಾದ ಸ್ಥಿತಿಯಲ್ಲಿ ಇರುವುದರಿಂದ ದಾಂಡೇಲಿಯ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಇದ್ದ ಮನೆಗಳನ್ನು ನೆಲಸಮ ಮಾಡಿ 3040, 5040 ನಿವೇಶನ ಸಿದ್ಧಪಡಿಸಿ ವಿತರಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು. ತಹಸೀಲ್ದಾರ್ ಶೈಲೇಶ ಪರಮಾನಂದ ಇದ್ದರು.