

ಹಿರೇಕೆರೂರ: ಕ್ಷೇತ್ರದಲ್ಲಿ ರಸ್ತೆ ಅಕ್ಕಪಕ್ಕದಲ್ಲಿನ ಒಣಗಿದ ಮರಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ದ್ವಿತೀಯ ದರ್ಜೆ ಸಹಾಯಕ ಡಿ.ಎಸ್. ಪೂಜಾರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳ ಅಕ್ಕಪಕ್ಕದಲ್ಲಿ ಪುರಾತನ ಮರಗಳಿದ್ದು, ಅವುಗಳಲ್ಲಿ ಕೆಲವು ಕೊಳೆತು ಹೋಗಿವೆ. ಇನ್ನು ಕೆಲವು ಒಣಗಿದ್ದು, ಇಂದೋ, ನಾಳೆಯೋ ಬೀಳುವ ಹಂತದಲ್ಲಿವೆ. ಇದರಿಂದ ಈ ಮಾರ್ಗದಲ್ಲಿ ಪ್ರಯಾಣಿಸುವ ಸವಾರರ ಪ್ರಾಣಕ್ಕೆರವಾಗುವ ಸಾಧ್ಯತೆ ಇದೆ. ಸೋಮವಾರ ಮಾಸೂರು ರಸ್ತೆಯ ಎಪಿಎಂಸಿ ಬಳಿ ಮರವೊಂದು ಬಿದ್ದು ಇಬ್ಬರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಹೆಸ್ಕಾಂ ನೌಕರರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಇಂತಹ ದುರಂತಗಳು ಮತ್ತೆ ಮರುಕಳಿಸದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಒಣ ಹಾಗೂ ಗೆದ್ದಲು ಹಿಡಿದಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಪಪಂ ಸದಸ್ಯರಾದ ಗುರುಶಾಂತ ಯತ್ತಿನಹಳ್ಳಿ, ಹರೀಶ ಕಲಾಲ, ಹನುಮಂತ ಕುರಬರ, ಸಿ.ಬಿ. ಮಾಳಗಿ, ಹೊನ್ನಪ್ಪ ಸಾಲಿ, ವೀರಣ್ಣ ಚಿಟ್ಟೂರ, ರಾಮು ಮುರಡೇಶ್ವರ, ಬಸವರಾಜ ಚಿಂದಿ, ಉಮೇಶ ಬಣಕಾರ, ನಿಂಗಾಚಾರಿ ಮಾಯಾಚಾರಿ ಹಾಗೂ ಕಾರ್ಯಕರ್ತರು ಇದ್ದರು.