

ಸಿದ್ದಾಪುರ: ಶಾಲೆ, ಅಂಗನವಾಡಿ, ರಸ್ತೆ ಅಕ್ಕಪಕ್ಕದಲ್ಲಿರುವ ಅಪಾಯದ ಮರಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಕೆಲಸ ಮಾಡದ ಅಧಿಕಾರಿ ಹಾಗೂ ಸಿಬ್ಬಂದಿ ನಮಗೆ ಬೇಕಿಲ್ಲ. ಅಂತಹ ಅಧಿಕಾರಿ, ಸಿಬ್ಬಂದಿಯನ್ನು ಶೀಘ್ರದಲ್ಲಿ ವರ್ಗಾವಣೆ ಮಾಡಿಸುತ್ತೇನೆ. ಅಂತಹ ಅಧಿಕಾರಿ ಹಾಗೂ ಸಿಬ್ಬಂದಿ ಪಟ್ಟಿ ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅವರು ತಹಸೀಲ್ದಾರರಿಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೖೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಇಲ್ಲಿಯವರೆಗೆ 366 ಮಿಮೀ ಮಳೆ ಬಿದ್ದು ದಾಖಲಾಗಿದೆ. ವಾಡಿಕೆ ಮಳೆಗಿಂತ ಶೇ. 272ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ತಿಳಿಸಿದರು.
ಮಳೆ ಮಾಹಿತಿ ಸರಿಯಾಗಿ ನೀಡದಿರುವುದರಿಂದಲೇ ರೈತರಿಗೆ ಬರಬೇಕಾದ ಬೆಳೆ ವಿಮೆ ವಿಳಂಬವಾಗಿದೆ. ತಾಲೂಕಿನಲ್ಲಿರುವ ಮಳೆ ಮಾಪನ ಕೇಂದ್ರ ಎಷ್ಟು ಸರಿ ಇದೆ. ಅದನ್ನು ನಿರ್ವಹಣೆ ಮಾಡುವವರು ಯಾರು? ಎಂದು ಶಾಸಕ ಪ್ರಶ್ನಿಸಿದರು. ಶೀಘ್ರದಲ್ಲಿಯೇ ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಮಳೆಮಾಪನ ಕೇಂದ್ರದ ಮಾಹಿತಿ ನೀಡುವ ಕುರಿತು ಸಭೆ ಕರೆಯಬೇಕು. ವ್ಯವಸ್ಥೆ ಏನಾಗಿದೆ ಎನ್ನುವುದನ್ನು ಜನತೆಗೆ ತಿಳಿಸಬೇಕು ಎಂದು ನಿರ್ವಹಣೆ ಹೊಣೆ ಹೊತ್ತವರಿಗೆ ಸೂಚಿಸಿದರು.
ಅರಣ್ಯ ಇಲಾಖೆಯವರು ಪಾರಂಪರಿಕವಾಗಿ ಅರಣ್ಯವನ್ನು ಈ ಹಿಂದೆ ಹೇಗೆ ಬೆಳೆಯುತ್ತಿದ್ದರೋ ಅದೇ ರೀತಿ ಬೆಳೆಯುವುದಕ್ಕೆ ಮುಂದಾಗಬೇಕು. ಕಾಡುಪ್ರಾಣಿಗಳ ಮೇವಿಗೆ ಅನುಕೂಲವಾಗುವಂತೆ ಬೆಳೆಯಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗಟಾರ ಹೂಳೆತ್ತಿ: ಗಟಾರದಲ್ಲಿ ಹರಿಯಬೇಕಾದ ಮಳೆನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಕುರಿತು ಸಂಬಂಧಪಟ್ಟ ಲೋಕೋಪಯೋಗಿ ಹಾಗೂ ಜಿಪಂ ಇಲಾಖೆ ಕೂಡಲೇ ಕ್ರಮಕೈಗೊಂಡು ಗಟಾರಗಳನ್ನು ಹೂಳೆತ್ತಬೇಕು. ಅಲ್ಲದೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ರಸ್ತೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಮಳೆಗಾಲ ಆರಂಭವಾಗಿದ್ದು, ಮಳೆಗಾಲದಲ್ಲಿ ಎಲ್ಲೆಲ್ಲಿ ಅನಾಹುತ ಆಗುವ ಸಾಧ್ಯತೆ ಇದೆಯೋ ಅಂತಹ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತೆ ವಹಿಸಬೇಕು. ನೋಡಲ್ ಅಧಿಕಾರಿಗಳು ಪ್ರತಿ ನಿತ್ಯದ ವರದಿಯನ್ನು ತಹಸೀಲ್ದಾರ್ ಅವರಿಗೆ ನೀಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಆಡಳಿತಾಧಿಕಾರಿ ಬಸವರಾಜ ಪಿ., ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಹಾಗೂ ಇಲಾಖೆ ಅಧಿಕಾರಿಗಳಿದ್ದರು.