

ಮೂಡಿಗೆರೆ: ತಾಲೂಕಿನ ಹೊಸಮನೆ ಗ್ರಾಮದ ಕಾಲನಿ ನಿವಾಸಿ ಸುಧಾ ಎಂಬುವವರ ಮನೆಗೆ ಹೋಗುವ ರಸ್ತೆಯಲ್ಲಿ ಒಂದೂವರೆ ವರ್ಷದ ಹಿಂದೆ ಸ್ಥಳೀಯರೊಬ್ಬರು ಅಕ್ರಮವಾಗಿ ಜಾನುವಾರು ಕೊಟ್ಟಿಗೆ ನಿರ್ಮಿಸಿದ್ದಾರೆ. ಕೊಟ್ಟಿಗೆ ತೆರವುಗೊಳಿಸುವಂತೆ ಒತ್ತಾಯಿಸಿ ಚಿನ್ನಿಗ ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಗ್ರಾಪಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಮುಖಂಡ ಯು.ಬಿ.ಮಂಜಯ್ಯ ಮಾತನಾಡಿ, ಗ್ರಾಪಂನ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಒಂದೂವರೆ ವರ್ಷದ ಹಿಂದೆ ಗ್ರಾಮದ ಓರ್ವ ಜಾನುವಾರು ಕೊಟ್ಟಿಗೆ ನಿರ್ಮಿಸಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ತೆರವುಗೊಳಿಸುತ್ತಿಲ್ಲ. ಗ್ರಾಪಂನಿಂದ ನಿರ್ಮಿಸಿದ ಕಾಂಕ್ರೀಟ್ ರಸ್ತೆಯ ಕೊನೆಯಲ್ಲಿ 4 ಮನೆಗಳಿವೆ. ಗ್ರಾಮಸ್ಥರು ಅದೇ ರಸ್ತೆಯಲ್ಲಿ ಜಮೀನಿಗೂ ಹೋಗಬೇಕಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಕೊಟ್ಟಿಗೆ ನಿರ್ಮಿಸಿ ಸಂಚಾರಕ್ಕೆ ಅಡ್ಡಿ ಪಡಿಸುವುದು ಕ್ರಿಮಿನಲ್ ಅಪರಾಧ. ಕೊಟ್ಟಿಗೆ ನಿರ್ಮಿಸಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಸುಧಾ ಮಾತನಾಡಿ, ನಾನು ಹಲವು ವರ್ಷದ ಹಿಂದೆ ಮನೆ ನಿರ್ಮಿಸಿಕೊಂಡಿದ್ದೇನೆ. ಮನೆಗೆ ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಸ್ಥಳೀಯರೊಬ್ಬರು ಕೊಟ್ಟಿಗೆ ನಿರ್ಮಿಸಿ ಜಾನುವಾರ ಸಾಕುತ್ತಿದ್ದಾರೆ. ಇದರಿಂದ ನನ್ನ ಮನೆಗೆ ಹೋಗಲು ದಾರಿ ಇಲ್ಲ. ಮಕ್ಕಳು ಶಾಲೆಗೆ ಹೋಗಲು ಹರಸಾಹಸ ಪಡಬೇಕಾಗಿದೆ. ಕೊಟ್ಟಿಗೆ ತೆರವುಗೊಳಿಸಿ ದಾರಿ ಮಾಡಿಕೊಡಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮಹೇಶ್ ಉದುಸೆ, ಶ್ರೀಕಾಂತ್, ನಾಗರಾಜ್, ಮಂಜುನಾಥ್, ಸುಧಾ, ಮಂಜುಳಾ ಇತರರಿದ್ದರು.