

ಕಡೂರು: ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿರುವುದನ್ನು ತೆರವುಗೊಳಿಸಿ ಜನಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಕೆ.ಹೊಸಳ್ಳಿ ಗ್ರಾಮಸ್ಥರು ಗುರುವಾರ ಪುರಸಭೆ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಹೊಸಹಳ್ಳಿ ರವಿಕುಮಾರ್ ಮಾತನಾಡಿ, ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಸಾರ್ವಜನಿಕರು ಸಂಚರಿಸುತ್ತಿದ್ದ ರಸ್ತೆಯನ್ನು ಸೇರಿಸಿ ಸ್ವಲ್ಪ ಜಾಗ ಅತಿಕ್ರಮಿಸಿ ಕಾಂಪೌಂಡ್ ನಿರ್ಮಿಸಿರುವುದರಿಂದ ಓಡಾಡಲು ತೊಂದರೆಯಾಗಿದೆ. ಪುರಸಭೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ಇಲ್ಲಿನ ನಿವೇಶನದ ಕುರಿತು ಈ ಹಿಂದೆಯೂ ತಕರಾರು ಇದೆ. ಜಾಗ ಪುರಸಭೆ ಆಸ್ತಿ. ಸ್ಥಳ ವೀಕ್ಷಿಸಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಸಭೆಯಲ್ಲಿ ಆಡಳಿತ ಮಂಡಳಿಯಿಲ್ಲದ ಪರಿಣಾಮ
ಸದಸ್ಯರು ಯಾವ ನಿರ್ಧಾರ ಕೈಗೊಳ್ಳಲೂ ಸಾಧ್ಯವಾಗುತ್ತಿಲ್ಲ. ಪುರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಈ ಪ್ರಕರಣ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ನಾನು ಶಾಸಕ ಕೆ.ಎಸ್.ಆನಂದ್ ಅವರ ಜತೆ ಚರ್ಚಿಸುತ್ತೇನೆ ಎಂದರು.
ಪುರಸಭೆ ಸದಸ್ಯ ಗೋವಿಂದು ಮಾತನಾಡಿ, ಹಲವಾರು ವರ್ಷಗಳಿಂದ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿಕೊಂಡಿರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಸಮಸ್ಯೆ ಬಗೆಹರಿಸಲು ಉಪವಿಭಾಗಾಧಿಕಾರಿ ಮುಂದಾಗಬೇಕು ಎಂದು ಮನವಿ ಮಾಡಿದರು.
ನಿವಾಸಿಗರಾದ ರವಿಕುಮಾರ್, ಯತೀಶ್, ಮಂಜಪ್ಪ, ಚಂದ್ರಪ್ಪ, ಹಾಲಪ್ಪ, ದಿನೇಶ, ಮಹೇಶ್ವರಮ್ಮ, ಸಾವಿತ್ರಮ್ಮ, ದಾಕ್ಷಾಯಿಣಮ್ಮ, ಲತಾ, ಕಾಂತಮ್ಮ, ಭಾಗ್ಯಾ ಇತರರಿದ್ದರು.
ಕಾಂಪೌಂಡ್ ನಿರ್ಮಿಸಿರುವ ಮಂಗಳಾ ಕೂಡ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಮನೆ ನನ್ನ ಕುಟುಂಬದ ಪಿತ್ರಾರ್ಜಿತ ಆಸ್ತಿ. ಚಿಕ್ಕಂಗಳ ಗ್ರಾಮ ಪಂಚಾಯಿತಿಯಲ್ಲಿದ್ದಾಗ ದಾಖಲೆಗಳಲ್ಲಿಯೂ 55*50 ಅಡಿ ಜಾಗ ನಮ್ಮ ಹೆಸರಲ್ಲಿಯೇ ಇದೆ. ಇದೇ ಜಾಗಕ್ಕೆ ಪ್ರಸಕ್ತ ವರ್ಷದ ಪುರಸಭೆಯೇ ನೀಡಿರುವ ಇ-ಸ್ವತ್ತು ಸಹ ಇದೆ. ಕೆಲವರು ಜಾಗ ಕಬಳಿಸಲು ತೊಂದರೆ ಕೊಡುತ್ತಿದ್ದಾರೆ. ಆ ಜಾಗದಲ್ಲಿ ಯಾವುದೇ ರಸ್ತೆಯಿಲ್ಲ. ಅನುಮತಿ ಮೇರೆಗೆ ಜನರು ಓಡಾಡುತ್ತಿದ್ದರು. ಇವೆಲ್ಲವೂ ತಿಳಿದಿದ್ದೂ ಕೆಲವರು ದೌರ್ಜನ್ಯ ಮಾಡುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಹಲ್ಲೆಯನ್ನೂ ಮಾಡಿದ್ದಾರೆ. ಪುರಸಭೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.