

ಕಳಸ: ತಾಲೂಕಿನಲ್ಲಿರುವ ಕಂದಾಯ ಭೂಮಿಯ ಅತಿಕ್ರಮಣ ತಡೆದು ಜನರ ಉಪಯೋಗಕ್ಕೆ ಉಳಿಸಬೇಕು ಎಂದು ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ತಾಲೂಕು ಕೇಂದ್ರಕ್ಕೆ ಬೇಕಾದ ಭೂಮಿ ಇಲ್ಲ ಎಂದು ಕಂದಾಯ ಇಲಾಖೆ ಕೈಚೆಲ್ಲುತ್ತಿದೆ. ಆದರೆ ವಿವಿಧ ಇಲಾಖೆಗಳ ಕಚೇರಿಗಳಿಗೆ ಮತ್ತು ವಸತಿಗೃಹಕ್ಕೆ ಬೇಕಾದ 90 ಎಕರೆ ಭೂಮಿ ಕಳಸದ ಮಾವಿನಕೆರೆ ಗ್ರಾಮದ ಸರ್ವೇ ನಂಬರ್ 641ರಲ್ಲಿ ಬಹಳಷ್ಟು ಸರ್ಕಾರಿ ಭೂಮಿ ಕಬಳಿಸಲಾಗಿದೆ. ಈ ಬಗ್ಗೆ ಹಿಂದಿನ ಎಲ್ಲ 12 ತಹಸೀಲ್ದಾರರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಕಳಸ ತಾಲೂಕು ಕೇಂದ್ರವಾದರೂ ಅನೇಕ ಸರ್ಕಾರಿ ಕಟ್ಟಡಗಳಿಗೆ ಜಾಗವಿಲ್ಲ . ಆದರೆ ಕಳಸ ಪಟ್ಟಣಕ್ಕೆ ಹತ್ತಿರವೇ ಸಾಕಷ್ಟು ಭೂಮಿ ಇದ್ದರೂ ಅದನ್ನು ಬಳಕೆ ಮಾಡಲು ಒತ್ತುವರಿ ಸಮಸ್ಯೆ ಅಡ್ಡಿ ಆಗಿದೆ ಎಂದು ದೂರಿದರು.
ಬಾಳೆಹೊನ್ನೂರು ರಸ್ತೆಗೆ ಹೊಂದಿಕೊಂಡಿರುವ ಈ ಸರ್ವೇ ನಂಬರ್‌ನಲ್ಲಿ ತಾಲ್ಲೂಕು ಆಸ್ಪತ್ರೆ, ತಾಲೂಕು ಕ್ರೀಡಾಂಗಣ, ಸಿಬ್ಬಂದಿ ವಸತಿಗೃಹ ಮತ್ತಿತರ ಇಲಾಖೆಗಳ ಕಟ್ಟಡ ನಿರ್ಮಿಸಲು ಸಾಕಷ್ಟು ಭೂಮಿ ಇದೆ. ಈ ಜಾಗವನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದನ್ನು ತೆರವು ಮಾಡಿದರೆ ಎಲ್ಲ ಉದ್ದೇಶಕ್ಕೂ ಜಾಗ ಸಿಗುತ್ತದೆ. ಆದ್ದರಿಂದ ಈ ಜಾಗವನ್ನು ಸಂಪೂರ್ಣ ಸರ್ವೇ ಮಾಡಿ ಸರ್ಕಾರಿ ಭೂಮಿ ಗುರುತಿಸಬೇಕು ಎಂದು ಆಗ್ರಹಿಸಿದರು.
ನಾನು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿಗೆ ತಹಸೀಲ್ದಾರ್ ಆಗಿ ಬಂದಿದ್ದು, ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಶಾರದ ಭರವಸೆ ನೀಡಿದ ನಂತರ ತಾಲೂಕು ಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದುಕೊಂಡರು.
ಮುಖಂಡರಾದ ಗೋಪಾಲ ಶೆಟ್ಟಿ, ಗೋಪಾಲ ಹಡ್ಲು, ಗಣೇಶ್ ಹೊರನಾಡು, ಮೋಹನ್ ಹಿರೇಬೈಲ್ ಮತ್ತಿತರರು ಇದ್ದರು.