

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದ್ದು, ಅದರ ನೀಲಿನಕ್ಷೆ ನನ್ನ ಬಳಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ಕುರಿತು ಬನ್ನಿಮಂಟಪದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪಕ್ಷದ ವಿಭಾಗದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿ ಉತ್ಸಾಹ ಇರಲಿಲ್ಲ. ಈ ಕುರಿತು ದೆಹಲಿಯಲ್ಲಿ ಸಹ ಚರ್ಚೆ ನಡೆದವು. ಬೆಂಗಳೂರು- ಮೈಸೂರು ಪಾದಯಾತ್ರೆಯಿಂದ ಏನೂ ಆಗಲ್ಲ ಎಂದು ನಮ್ಮ ಮುಖಂಡರು ಹೇಳುತ್ತಿದ್ದರು. ಪಕ್ಷದ ಸಂಘಟನೆ ಬಲಗೊಳ್ಳಲು, ಕಾರ್ಯಕರ್ತರು ಉತ್ಸಾಹಗೊಳಿಸಲು ಹೋರಾಟ ಅನಿವಾರ್ಯ. ಪಾದಯಾತ್ರೆ ನಿರ್ಧಾರ ಕೈಗೊಂಡಿದ್ದು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಮಾಡಲು ಎಂದರು.
ಚುನಾವಣೆ ಸಮಯದಲ್ಲಿ ಮಾತ್ರ ಹೋರಾಟ ಕಾಲ ಈಗಿಲ್ಲ. ಪಕ್ಷವನ್ನು ಅಧಿಕಾರಕ್ಕೆ ಬರಲು ಸಂಘಟನೆ ಮಾಡಬೇಕು. ಚುನಾವಣೆ ಸಮಯದಲ್ಲಿ ಇದು ಸಾಧ್ಯವಿಲ್ಲ. ಈಗಿನಿಂದಲೇ ಶುರುಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಜಿಪಂ ಕ್ಷೇತ್ರ ಗೆಲ್ಲಬೇಕು. ಇದರಿಂದಾಗಿ ಮುಂಬರುವ ದಿನಗಳಲ್ಲಿ ಚುನಾವಣೆ ಗೆಲ್ಲಲು ಸಹಾಯ ಆಗುತ್ತದೆ ಎಂದರು.
ಜೆಡಿಎಸ್ ಅನ್ನು ನಂಬಿಕೊಂಡು ರಾಜಕಾರಣ ಮಾಡಲು ಆಗಲ್ಲ. ಬಿಜೆಪಿ ಬಲಿಷ್ಠವಾಗಬೇಕು ಎಂದೂ ಹೇಳಿದರು.
ಮಂಡ್ಯದಲ್ಲಿ ಬಿಜೆಪಿ ಗೆಲ್ಲಲ್ಲ ಎಂದು ನಾವೇ ತೀರ್ಮಾನ ಮಾಡಿದ್ದೆವು. ಪಕ್ಷ ಅಧಿಕಾರದಲ್ಲಿ ಇದ್ದಾಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಪಕ್ಷವನ್ನೇ ಬೇರೆ ಪಕ್ಷಕ್ಕೆ ಧಾರೆ ಎರೆದುಕೊಟ್ಟಿದ್ದರು. ನಮ್ಮ ಪಕ್ಷ ಕಾರ್ಯಕರ್ತರಗಿಂತ ಬೇರೆ ಪಕ್ಷ ಕಾರ್ಯಕರ್ತರೊಂದಿಗೆ ಹೆಚ್ಚಿನ ಸಮಯ ಕಳೆದರು. ಹೀಗಾದರೆ ಪಕ್ಷ ಬೆಳೆಯಲಿದೆಯೇ? ಎಂದು ಸ್ವಪಕ್ಷೀಯ ವಿರುದ್ಧ ಕಿಡಿಕಾರಿದರು.
ನಮ್ಮ ಹೋರಾಟದ ಪರಿಣಾಮ ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶಿಸಿದರು. ಮುಂದೆ ಸಿಬಿಐಗೆ ಈ ಪ್ರಕರಣ ವರ್ಗಾವಣೆ ಆಗಲಿದೆ. ಅಕ್ಟೋಬರ್ ಅಂತ್ಯಕ್ಕೆ ಸಿದ್ದರಾಮಯ್ಯ ನಿಶ್ಚಿತವಾಗಿ ರಾಜೀನಾಮೆ ಕೊಡ್ತಾರೆ ಎಂದು ಭವಿಷ್ಯ ನುಡಿದರು.
ನಮ್ಮ ಪಕ್ಷ ಕೆಲ ಮುಖಂಡರ ಸಭೆ ಬೆಂಗಳೂರಿನಲ್ಲಿ ಮೊನ್ನೆ ನಡೆಯಿತು. ಅದಕ್ಕೆ ನಾವು ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ, ನಗರಾಧ್ಯಕ್ಷ ಎಲ್.ನಾಗೇಂದ್ರ, ಶಾಸಕ ಶ್ರೀವತ್ಸ, ಮಾಜಿ ಶಾಸಕರಾದ ನಿರಂಜನ್‌ಕುಮಾರ್, ಹರ್ಷವರ್ಧನ್, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕಾರ್ಯದರ್ಶಿ ತಮ್ಮೇಶ್ ಗೌಡ, ಶರಣು ದಂಡಿಕೆರೆ, ಮುಖಂಡರಾದ ಮೈ.ವಿ.ರವಿಶಂಕರ್ ಇನ್ನಿತರರಿದ್ದರು.
ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಸಂದರ್ಭದಲ್ಲೂ ಬಿಜೆಪಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲೇಬೇಕು. ಇಲ್ಲವಾದರೆ ಮೊಸಳೆ, ಮೀನನ್ನು ತಿಂದು ಹಾಕಿದಂತಹ ಸ್ಥಿತಿ ನಮಗೂ ಬರುತ್ತದೆ. ನಮಗೆ ಮೊಸಳೆ-ಮೀನಿನಾಟ ಬೇಡ. ಪಕ್ಷ ಬಲಿಷ್ಠವಾಗಲೇಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು.
ಮಂಡ್ಯ, ಹಾಸನ ಕ್ಷೇತ್ರವನ್ನು ಜೆಡಿಎಸ್ ಬಿಟ್ಟು ಕೊಟ್ಟಿದ್ದೇವೆಂದು ಬಿಜೆಪಿ ಕಚೇರಿಗೆ ಬಾಗಿಲು ಹಾಕಬೇಕಿಲ್ಲ. ಈ ಹೊಂದಾಣಿಕೆ ಶಾಶ್ವತ ಎಂಬ ಪ್ರಶ್ನೆಗೆ ಉತ್ತರ ಯಾರ ಬಳಿ ಇಲ್ಲ. ಈ ನಡುವೆ, ಬಿಜೆಪಿ ಸಂಘಟನೆ ಮಾಡಲೇ ಬೇಕು ಎಂದರು.
ಪ್ರತಿ ಬೂತ್‌ನಲ್ಲಿ 200 ಮತ ಸೇರಿಸಿಕೊಳ್ಳದಿದ್ದರೆ ಯಾವ ಶಕ್ತಿಯನ್ನು ಇಟ್ಟುಕೊಂಡು ಸಂಘಟನೆ ಮಾಡಲು ಸಾಧ್ಯ. ಚುನಾವಣೆ ಸಮಯದಲ್ಲಿ ಎಷ್ಟು ಗಂಭೀರವಾಗಿ ಕೆಲಸ ಮಾಡುತ್ತೇವೆಯೋ ಅಷ್ಟೇ ಪ್ರಾಮಾಣಿಕವಾಗಿ ಸದಸ್ಯತ್ವ ಅಭಿಯಾನದ ಕೆಲಸವನ್ನೂ ಮಾಡಬೇಕಿದೆ ಎಂದರು.
ಹಳೇ ಮೈಸೂರು ಭಾಗದಲ್ಲಿ ಸೋತಿರುವ ಕ್ಷೇತ್ರದಲ್ಲಿ 25 ಸಾವಿರ, ಗೆದ್ದು ಸೋತ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಪಕ್ಷಕ್ಕೆ ಹೊಸ ಸದಸ್ಯರು ಸೇರ್ಪಡೆ ಮಾಡಲೇ ಬೇಕು. ಮುಸ್ಲಿಂ ಸಮುದಾಯದ ಜನರು ಹೆಚ್ಚಿರುವ ನರಸಿಂಹರಾಜದಲ್ಲಿ ಸಹ ಸದಸ್ಯತ್ವ ಅಭಿಯಾನ ಹೆಚ್ಚಿಸಬೇಕು. ಮುಂದಿನ ಚುನಾವಣೆಗಳ ಟಿಕೆಟ್ ಕೇಳಲು ಸದಸ್ಯತ್ವವೇ ಮಾನದಂಡವಾಗಲಿದೆ ಎಂದರು.
ಸಿಎಂ ರಾಜೀನಾಮೆ ಕೊಡುವ ಅಗತ್ಯ ಇಲ್ಲ ಎಂದಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ ಅವರ ವೈಯಕ್ತಿಕ ವಿಚಾರ. ಎಚ್.ಡಿ.ಕುಮಾರಸ್ವಾಮಿ ಎಲ್ಲವನ್ನೂ ಸರಿ ಮಾಡ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ತಪ್ಪು ಮಾಡಿಲ್ಲ ಎಂದ ಸಿದ್ದರಾಮಯ್ಯ ಅವರು 14 ಸೈಟ್‌ಗಳನ್ನು ಏಕೆ ವಾಪಸ್ ಕೊಟ್ಟರು? ಈಗ ಜ್ಞಾನೋದಯವಾಗಿದೆ. ಈಗ ತಪ್ಪಿನ ಅರಿವಾಗಿದೆ. ಆದ್ದರಿಂದ ಸಬೂಬು ಕೊಡುವ ಬದಲು ರಾಜೀನಾಮೆ ಕೊಡಲಿ. ವಿರೋಧ ಪಕ್ಷದಲ್ಲಿ ಇದ್ದಾಗ ಒಂದು, ಮುಖ್ಯಮಂತ್ರಿ ಆಗಿದ್ದಾಗ ಒಂದು ಹೇಳಿಕೆ ಎಷ್ಟು ಸರಿ? ಎಂದು ಪ್ರಶ್ನಿಸಿದರು
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಪಿಡಿಒಗಳು ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡ್ತಾ ಇದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೆಪಿಎಸ್‌ಸಿ ಪರೀಕ್ಷೆಯ ದಿನಾಂಕ ಇನ್ನೂ ನಿಗದಿ ಮಾಡಿಲ್ಲ. ಸಚಿವರು ಪ್ರವಾಸ ಮಾಡ್ತಾ ಇಲ್ಲ. ರಾಜ್ಯದಲ್ಲಿ ಸರ್ಕಾರದ ಇದೆಯೋ ಇಲ್ಲವೋ? ಎಂದು ಹರಿಹಾಯ್ದರು
ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಬಗ್ಗೆ ದೆಹಲಿಯಲ್ಲಿ ನಾಯಕರೊಂದಿಗೆ ಸಮಾಲೋಚಿಸಲಾಗುವುದು. ಕಳೆದ ಬಾರಿ 70 ಸಾವಿರ ಮತ ಪಡೆದಿರುವ ಸಿ.ಪಿ.ಯೋಗೇಶ್ವರ್ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನೂ ಇಲ್ಲ ಎಂದರು.