ಜಮೀನು ಒತ್ತುವರಿ ತೆರವುಗೊಳಿಸಿ

kdp meeting lead
ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಮಾತನಾಡಿದರು. ಡಿಸಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಇತರರಿದ್ದರು.
Published on

ಚಿಕ್ಕಮಗಳೂರು: ಖಾಲಿ ಇರುವ ಸರ್ಕಾರಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಅಧಿಕಾರಿಗಳು ಒತ್ತು ನೀಡಬೇಕು. ಸ್ಮಶಾನಗಳಿಗೆ ಜಾಗ ನೀಡಲು ಸಾಧ್ಯವಾಗದಿದ್ದಾಗ ಶ್ರೀಮಂತರಿಗೆ ಎಕರೆಗಟ್ಟಲೆ ಮಂಜೂರು ಮಾಡಲು ಎಲ್ಲಿಂದ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಪ್ರಶ್ನಿಸಿದರು.

ನಗರ ಹೊರವಲಯದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪ್ರಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಗೊತ್ತಿದ್ದ ಮಟ್ಟಿಗೆ ಸಾರ್ವಜನಿಕ ಉದ್ದೇಶಕ್ಕೆ ಜಾಗ ಕೊಡಲು ಚಿಕ್ಕಮಗಳೂರಿನಲ್ಲಿ ಎಲ್ಲೂ ಜಾಗವಿಲ್ಲ. 1 ಲಕ್ಷ ಎಕರೆಗೂ ಅಧಿಕ ಜಮೀನು ಒತ್ತುವರಿಯಾಗಿದೆ. ಇದರ ತೆರವಿಗೆ ಕ್ರಮ ಕೈಗೊಂಡು ಜಾಗ ರಕ್ಷಿಸಲು ಮುಂದಾಗಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು. 52, 53, 57, 93, 94ಸಿ ಅಡಿ ಬರುವ ಅರ್ಜಿಗಳನ್ನು ಪರಿಶೀಲಿಸಬೇಕು. ಅರ್ಹರಿಗೆ ನಿವೇಶನ, ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಅರ್ಜಿಗಳನ್ನು ತಿರಸ್ಕೃರಿಸಲು ಸಾಧ್ಯವಾಗದಿದ್ದರೆ ಎಸಿ, ಡಿಸಿಗೆ ಕಳುಹಿಸಿಕೊಡಿ. ಸ್ಮಶಾನಕ್ಕೆ ಜಾಗ ಇಲ್ಲದಿದ್ದರೂ ಫಾರ್ಮ್ 52, 57ಸಿ ಅಡಿ ಜಾಗ ಮಂಜೂರು ಮಾಡಲಾಗುತ್ತಿದೆ. ಬಡವರಿಗೆ ಉಚಿತವಾಗಿ ನಿವೇಶನ, ಮನೆ ಕೊಡಲು ಆಗುತ್ತಿಲ್ಲ. ಶ್ರೀಮಂತರಿಗೆ ಜಾಗ ಮಂಜೂರು ಮಾಡಿದರೆ ಏನರ್ಥ ಎಂದು ಪ್ರಶ್ನಿಸಿದರು.
ಅರ್ಜಿದಾರರ ಗ್ರಾಮಗಳಿಗೆ ತಹಸೀಲ್ದಾರರು ಹೋಗಿ ತಕರಾರು ಇದ್ದರೆ ಕೂಡಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದು ತಿರಸ್ಕರಿಸಬೇಕು. ಸೆಕ್ಷನ್ 10 ಕಾನೂನು ಅಧ್ಯಯನ ಮಾಡಿದರೆ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬಹುದು. ಸಾರ್ವಜನಿಕ ಉದ್ದೇಶಕ್ಕೆ ಜಾಗ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿ. ಹಾಸ್ಟೆಲ್, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಬೇಕು ಎಂದು ತಾಕೀತು ಮಾಡಿದರು.
ಸರ್ಕಾರಿ ಇಲಾಖೆಗಳ ವ್ಯಾಪ್ತಿಯ ಆಸ್ತಿ ರಕ್ಷಿಸಿಕೊಳ್ಳಬೇಕು. ಕಡ್ಡಾಯವಾಗಿ ನೋಂದಣಿ ಮಾಡಿಸಿ ಆರ್‌ಟಿಸಿ ಮಾಡಿಸಬೇಕು. ಸ್ಥಳದಲ್ಲಿ ನಾಮಫಲಕ ಅಳವಡಿಸಬೇಕು. ಪ್ರವಾಸಿ ತಾಣಗಳಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ವಾಹನಗಳ ನಿಲ್ದಾಣಕ್ಕೆ ಜಾಗ ಗುರುತಿಸಬೇಕು. ಇಲ್ಲಿನ ಯಾವುದೇ ಉದ್ದೇಶಕ್ಕೆ ಜಾಗ ಮಂಜೂರು ಮಾಡಬೇಕಾದರೆ ಅರಣ್ಯ ಇಲಾಖೆ ಕಾನೂನುಗಳು ಅಡ್ಡಿ ಬರುತ್ತವೆ. ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಜಾಗ ಬೇಕಾಗಿರುವವರು ಪ್ರಸ್ತಾವನೆ ಕಳುಹಿಸಬೇಕು ಎಂದು ರಾಜೇಂದ್ರ ಕಟಾರಿಯ ಹೇಳಿದರು.
ಮಳೆಯಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ಕಲ್ಪಿಸಲಾಗಿದೆ. ಆಸ್ಪತ್ರೆ, ಅಂಗನವಾಡಿ, ವಿದ್ಯಾರ್ಥಿನಿಲಯಗಳಿಗೆ ಸ್ಪಂತ ಕಟ್ಟಡ ನಿರ್ಮಾಣಕ್ಕೆ ನಿವೇಶಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಂದ ಪ್ರಸ್ತಾವನೆ ಬಂದಿದೆ. ನಿವೇಶನ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 53, 54, 57, 94ಸಿ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹಂತಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net