

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡ್ಯಂಗಳ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಗುಡ್ಡ ಕುಸಿದು ಮಂಗಳವಾರ ರಸ್ತೆ ಸಂಚಾರಕ್ಕೆ ಅಡಚಣೆಯಾದ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಅಶೋಕ್‌ಕುಮಾರ್ ರೈ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿ ಬರೆಯನ್ನು ಪೂರ್ಣವಾಗಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಮಡ್ಯಂಗಳ ಭಾಗದ ನೂರು ಮೀಟರ್ ಅಂತರದಲ್ಲಿ ಎರಡು ಕಡೆಗಳಲ್ಲಿ ಮಂಗಳವಾರ ಹೆದ್ದಾರಿ ಬದಿಯ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿತ್ತು. ಅದರೊಂದಿಗೆ ಆ ಭಾಗದಲ್ಲಿದ್ದ ಮರಗಳು ಹಾಗೂ ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದವು. ಈ ಘಟನೆಯಿಂದಾಗಿ 3 ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಂಬಂಧಪಟ್ಟ ಇಲಾಖೆಯವರು ಕಾರ್ಯಾಚರಣೆ ನಡೆಸಿ ರಸ್ತೆಗೆ ಬಿದ್ದಿದ್ದ ಮಣ್ಣು, ಮರಗಳು ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದರು. ಆದರೆ ಅದೇ ಭಾಗದ ಸಮೀಪ ಮತ್ತೊಂದು ಕಡೆಯಲ್ಲಿ ಬುಧವಾರ ಸಣ್ಣಪ್ರಮಾಣದಲ್ಲಿ ಹೆದ್ದಾರಿ ಬದಿಯ ಗುಡ್ಡ ಕುಸಿತವಾಗಿದೆ.