ಒಣಗಿದ ಬಿದಿರು, ಮರವನ್ನು ತೆರವು ಮಾಡಿ

29 HANUR 1.
ತಾಳುಬೆಟ್ಟ-ಮ.ಬೆಟ್ಟ ಮಾರ್ಗದಲ್ಲಿ ಬಿದಿರು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಡಕಾಗಿರುವುದು.
Published on

ಹನೂರು; ತಾಲೂಕಿನ ತಾಳುಬೆಟ್ಟ -ಮಲೆ ಮಹದೇಶ್ವರಬೆಟ್ಟ ಮಾರ್ಗದ ಅಲ್ಲಲ್ಲಿ ಬಿದ್ದಿರುವ ಒಣಗಿದ ಬಿದಿರು ಹಾಗೂ ಮರವನ್ನು ತೆರವುಗೊಳಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ.

ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ. ಇಲ್ಲಿಗೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಮಾರ್ಗ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ಕಳೆದ ವರ್ಷ ಬೇಸಿಗೆಯಲ್ಲಿ ಬಿದಿರು ಬೊಂಬುಗಳು ಒಣಗಿ ರಸ್ತೆಗೆ ಬಾಗಿದ್ದು, ಬೀಳುವ ಸ್ಥಿತಿಯಲ್ಲಿತ್ತು. ಇದರಿಂದ ಸಂಚಾರಕ್ಕೆ ತೊಡುಕಾಗುವುದರ ಜತೆಗೆ ಭಕ್ತರಲ್ಲಿ ಜೀವಭಯದ ಮನೆ ಮಾಡಿತ್ತು. ಬಾಗಿರುವ ಬಿದಿರುಗಳನ್ನು ತೆರವುಗೊಳಿಸುವಂತೆ ಭಕ್ತರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಬಿದಿರನ್ನು ತೆರವುಗೊಳಿಸಿ ಅರಣ್ಯ ಅಂಚಿಗೆ ಹೊಂದಿಕೊಂಡಂತೆ ರಸ್ತೆ ಬದಿಯಲ್ಲೇ ಬಿಡಲಾಗಿತ್ತು.

ಆದರೆ ಇದೀಗ ಬೀಸುವ ಜೋರು ಗಾಳಿಗೆ ಬಿದಿರುಗಳು ಅಲ್ಲಲ್ಲಿ ರಸ್ತೆಗೆ ಬೀಳುತ್ತಿವೆ. ಜತೆಗೆ ಕೆಲವು ಕಡೆಗಳಲ್ಲಿ ಒಣಗಿದ ಬಿದಿರುಗಳು ರಸ್ತೆಗೆ ಬಾಗಿವೆ. ಇದರಿಂದ ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಜತೆಗೆ ಗಾಳಿಯ ಅಬ್ಬರಕ್ಕೆ ಅಲ್ಲಲ್ಲಿ ಸಣ್ಣ ಮರಗಳು ರಸ್ತೆಗೆ ಬಿದ್ದಿದ್ದು, ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಭಕ್ತರ ಹಿತದೃಷ್ಟಿಯಿಂದ ರಸ್ತೆಯಲ್ಲಿ ಬಿದ್ದಿರುವ ಬಿದಿರು ಹಾಗೂ ಮರವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net