ಅಪಾಯಕಾರಿ ಮರಗಳನ್ನು ತೆರವುಗೊಳಿಸಿ

bhr 1 (5)
Published on

ಬಾಳೆಹೊನ್ನೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆಯಿಂದ ಮರಗಳು ಬಿದ್ದು ಪ್ರಾಣ ಹಾನಿಯಾಗುತ್ತಿದ್ದು, ರಸ್ತೆ ಬದಿಯಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಕಳೆದ ವಾರ ಸುರಿದ ಗಾಳಿ ಮಳೆಗೆ ಮರದ ಕೊಂಬೆ ಬಿದ್ದು ಮೃತಪಟ್ಟ ಖಾಂಡ್ಯ ಹೋಬಳಿ ಬಿಳುಕೊಪ್ಪದ ಅನಿಲ್‌ಪಾಯ್ಸ ಅವರ ಕುಟುಂಬಕ್ಕೆ 5ಲಕ್ಷ ರೂ.ಪರಿಹಾರದ ಚೆಕ್ ವಿತರಿಸಿ  ಸುದ್ದಿಗಾರರೊಂದಿಗೆ ಮಾತನಾಡಿ, ಯಾರಾದರೂ ಪ್ರಾಣ ಕಳೆದುಕೊಂಡಾಗ ಹಣ ಕೊಟ್ಟರೆ ಮಾತ್ರ ಅದು ಸಾಲಲ್ಲ. ಮಾನವೀಯತೆಯ ದೃಷ್ಠಿಯಿಂದ ನೀಡುವುದು. ಆ ಕುಟುಂಬಕ್ಕೆ ನೈತಿಕವಾಗಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ ಎಂದರು.

ಪ್ರಸ್ತುತ ಜಿಲ್ಲಾಧಿಕಾರಿ ಮೂಲಕ 5 ಲಕ್ಷ ರೂ.ಪರಿಹಾರ ನೀಡಲಾಗುತ್ತಿದೆ. ಮೃತ ಅನಿಲ್‌ಪಾಯ್ಸ ಅವರ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮನೆ ನಿರ್ಮಾಣಕ್ಕೆ ಶಾಸಕ ರಾಜೇಗೌಡರು ವ್ಯಯಕ್ತಿಕವಾಗಿ ನೆರವು ನೀವುದಾಗಿ ತಿಳಿಸಿದ್ದಾರೆ. ಅನಿಲ್‌ಪಾಯ್ಸಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಸಹ ಮುಂದಿನ ವಿದ್ಯಾಭ್ಯಾಸಕ್ಕೆ ಸೂಕ್ತ ಅನುಕೂಲ ಕಲ್ಪಿಸಲು ಜಿಲ್ಲಾಧಿಕಾರಿಗೆ ತಿಳಿಸಲಾಗುವುದು ಎಂದರು.

ಕೊಪ್ಪ ತಾಲೂಕಿನ ಮೇಗೂರು ಹೊಸತೋಟ ಸಮೀಪ ಆಟೋ ಮೇಲೆ ಮರ ಬಿದ್ದು, ಚಾಲಕ ರತ್ನಾಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಐದಾರು ಪ್ರಯಾಣಿಕರನ್ನು ಬಿಟ್ಟು ಬರುವ ಸಂದರ್ಭದಲ್ಲಿ ಘಟನೆ ನಡೆದಿದೆ. ಅವರ ಕುಟುಂಬಕ್ಕೂ 5 ಲಕ್ಷ ರೂ.ಪರಿಹಾರದ ಚೆಕ್ ನೀಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net