ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿ

Clear cemetery land encroachment
Published on

ವಿಜಯಪುರ:ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನ ಭೂಮಿಗಳನ್ನು ಸಂಬಂಧಿಸಿದ ಗ್ರಾ.ಪಂ., ಪ.ಪಂ., ಪುರಸಭೆ, ನಗರಸಭೆ ಜವಾಬ್ದಾರಿಯಾಗಿದ್ದು, ಒತ್ತುರಿಯಾಗಿರುವ ಸ್ಮಶಾನ ಭೂಮಿ ತೆರವುಗೊಳಿಸಿ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ದೌರ್ಜನ್ಯ ನಿಯಂತ್ರಣ ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಒತ್ತುವರಿಯಾಗಿರುವ ಸ್ಮಶಾನ ಭೂಮಿಗಳನ್ನು ತೆರವುಗೊಳಿಸುವುದು ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯಾಗಿದೆ ಹಾಗೂ ಸಂರಕ್ಷಣೆ ಮಾಡುವುದು ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದ್ದು, ಇದನ್ನರಿತು ಅಧಿಕಾರಿಗಳು ತೆರವುಗೊಳಿಸಿ, ತೆರವುಗೊಳಿಸಿದ ನಂತರ ಸುತ್ತಲೂ ತಡೆಗೋಡೆ ನಿರ್ಮಿಸುವ ಮೂಲಕ ಸ್ಮಶಾನ ಭೂಮಿ ಸಂರಕ್ಷಣೆಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಒತ್ತುವರಿಯಾದ ಸ್ಮಶಾನಗಳನ್ನು ತೆರವುಗೊಳಿಸದೇ ಇದ್ದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾ,ಪಂ. ಮತ್ತು ಪ.ಪಂ. ವ್ಯಾಪ್ತಿಯಲ್ಲಿ ಕಾನೂನಿನ ಪ್ರಕಾರ ತೆರಿಗೆ ಸಂಗ್ರಹದಲ್ಲಿ ಶೇ. 25ರಷ್ಟು ಎಸ್​ಸಿಪಿ&ಟಿಎಸ್​ಪಿ ಅನುದಾನವನ್ನು ಮೀಸಲಿಟ್ಟು, ವಾರ್ಷಿಕ ಕ್ರಿಯಾಯೋಜನೆ ಮಾಡಿಕೊಂಡು ಎಸ್ಸಿ&ಎಸ್ಟಿ ಫಲಾನುಭವಿಗಳಿಗೆ ಈ ಅನುದಾನ ಸದ್ಬಳಕೆ ಮಾಡಬೇಕು. ಕಾನೂನಿನ್ವಯ ಶೇ. 25ರಷ್ಟು ಅನುದಾನ ಮೀಸಲಿಡುವುದು ಕಡ್ಡಾಯವಾಗಿದ್ದು, ಈ ಅನುದಾನ ಬೇರೆ ಉದ್ದೇಶಕ್ಕೆ ಬಳಕೆಯಾಗದಂತೆ ನಿಗಾ ವಹಿಸುವಂತೆ ಸೂಚಿಸಿದರು.

ಅಂಬೇಡ್ಕರ್​ ಅಭಿವೃದ್ದಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಖರೀದಿಯಾದ ಜಮೀನುಗಳಿಗೆ ಆರ್​ಟಿಸಿ ಹಾಗೂ ಪಹಣಿ ಬದಲಾವಣೆ ಕುರಿತಂತೆ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಕ್ರೂಢಿಕರಿಸಿಕೊಂಡು ಅರ್ಹ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಬೇಕು. ಭೂ ಮಂಜೂರಾತಿ ಆದೇಶ, ಖರೀದಿ ಪತ್ರ ಹಾಗೂ ನಡಾವಳಿ ಸಹಿತ ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್​ಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿಯಮಗಳನ್ನು ಪರಿಶೀಲಿಸಿಕೊಂಡು ನಿರ್ವಹಣೆ ಮಾಡಬೇಕು. ಫಲಾನುಭವಿಗಳು ಮರಣ ಹೊಂದಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಪ್ರಥಮಾದ್ಯತೆ ಮೇಲೆ ಕ್ರಮ ವಹಿಸುವಂತೆ ತಾಕೀತು ಮಾಡಿದರು.

ಸಂ&ಸಂಸ್ಥೆಗಳಿಗೆ ಸಹಾಯ ಧನ ಬಿಡುಗಡೆ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಪರಿಶಿಲಿಸಿ ಭೌತಿಕ ಪರಿಶೀಲನೆ ನಂತರ ಆರ್ಥಿಕ ಪ್ರಾಯೋಜನೆಯನ್ನು ನೋಡಿಕೊಂಡು ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿಕೊಂಡು ಖಚಿತಪಡಿಸಿದ ನಂತರ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು. ಸಹಕಾರಿ ಇಲಾಖೆಯಿಂದ ಎಸ್ಸಿ& ಎಸ್ಟಿ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್​ಗಳನ್ನು ವಿತರಿಸಲಾಗಿದ್ದು, ಯಾವುದೇ ಕಾರ್ಡ್​ ವಿತರಿಸುವುದು ಬಾಕಿ ಇರುವುದಿಲ್ಲ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅನೇಕ ಸಮಸ್ಯೆಗಳ ಕುರಿತು ಸಮಿತಿ ಸದಸ್ಯರು ಸಭೆಯ ಅವಗಾಹನೆಗೆ ತಂದಿದ್ದು, ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.2025 ಜನವರಿಯಿಂದ 2025 ಆಗಸ್ಟ್​ವರೆಗೆ ದೌರ್ಜನ್ಯ ಅಧಿನಿಯಮ 1989ರನ್ವಯ ದಾಖಲಾದ ಪ್ರಕರಣಗಳ ಮಾಹಿತಿ ಸಭೆಗೆ ನೀಡಲಾಯಿತು. ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಧನ ಮಂಜೂರು ಮಾಡುವ 6 ಪ್ರಕರಣಗಳು ಬಾಕಿ ಇದ್ದು, ಕೂಲಂಕಷವಾಗಿ ಪರಿಶೀಲನೆ ಬಾಕಿ ಪ್ರಕರಣಗಳನ್ನು ಆದ್ಯತಾನುಸಾರ ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.

ಸಭೆಯಲ್ಲಿ ಹೊರಗುತ್ತಿಗೆ ಆಧಾರದ ನೌಕರರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿ, ಆಸ್ತಿ ಪರಭಾರೆ, ಶಿಥಿಲಾವ್ಯವಸ್ಥೆಯಲ್ಲಿರುವ ನೀರಿನ ಟ್ಯಾಂಕ್​ ತೆರವುಗೊಳಿಸುವುದು, ಅಸ್ಪಶ್ಯತೆ ನಿವಾರಣೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸದಸ್ಯರು ಸಭೆಯ ಗಮನಕ್ಕೆ ತಂದರು.

ಜಿ.ಪಂ. ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ$್ಮಣ ನಿಂಬರಗಿ, ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ಅನುರಾಧಾ ವಸದ, ಡಿವೈಎಸ್​ಪಿ ಬಸವರಾಜ ಯಲಿಗಾರ, ಬಾಗೇವಾಡಿ ಡಿವೈಎಸ್​ಪಿ ಬಲ್ಲಪ್ಪ ನಂದಗಾಂವಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ. ಸೌದಾಗರ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಮುರುಗೇಶ ರೋಡಗಿ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಭಿಷೇಕ ಚಕ್ರವರ್ತಿ, ಸಿದ್ದು ರಾಯಣ್ಣವರ, ಯಮನಪ್ಪ ಸಿದರಡ್ಡಿ, ಮದನಕುಮಾರ ನಾಗರದಿನ್ನಿ, ನಾನು ಲಮಾಣಿ, ಸಿದ್ದಪ್ಪ ಗಸ್ತಿ, ಮಹಾಂತೇಶ ಸಾಸಬಾಳ, ರವಿಕಾಂತ ಬಿರಾದಾರ, ಮಲ್ಲು ತಳವಾರ, ರಾಜಶೇಖರ ಚೌರ ಮತ್ತಿತರರಿದ್ದರು.

ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೌರ್ಜನ್ಯ ನಿಯಂತ್ರಣ ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಡಾ. ಆನಂದ ಕೆ., ಲಕ್ಷ$್ಮಣ ನಿಂಬರಗಿ, ರಿಷಿ ಆನಂದ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net