

ಶೃಂಗೇರಿ: ಮೆಣಸೆ ಗ್ರಾಪಂ ವ್ಯಾಪ್ತಿಯ ಮಸಿಗೆ ಶಾಲೆ ಸಭಾಂಗಣದಲ್ಲಿ ಮಸಿಗೆ ಗ್ರಾಮದ ವಾರ್ಡ್ ಸಭೆ ನಡೆಯಿತು. ಸಭೆಯಲ್ಲಿ 2024ನೇ ಸಾಲಿನ ಕಾಮಗಾರಿ ಪ್ರಗತಿ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಗ್ರಾಮಸ್ಥ ಕಾನುವಳ್ಳಿ ಹರೀಶ್ ಮಾತನಾಡಿ, ಕಾನುವಳ್ಳಿ ರಸ್ತೆ ಹೊಂಡ-ಗುಂಡಿಗಳಿಂದ ಆವೃತ್ತವಾಗಿದೆ. ಜನಸಾಮಾನ್ಯರಿಗೆ ಓಡಾಡಲು ಹಾಗೂ ವಾಹನ ಸಂಚರಿಸಲು ತೊಡಕಾಗಿದೆ ಎಂದರು. ಗ್ರಾಮದ ಇಕ್ಕೆಲೆಗಳಲ್ಲಿ ರಸ್ತೆಗೆ ಬಾಗಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸಬೇಕು. ಗ್ರಾಮಸ್ಥರು ತಾವು ವಾಸವಿರುವ ಗ್ರಾಮದ ವಾರ್ಡ್‌ನ ಚುನಾವಣಾ ಗುರುತಿನ ಚೀಟಿ ಪಡೆಯಬೇಕು. ಆದರೆ ಕೆಲವರು ಪಕ್ಕದ ವಾರ್ಡ್‌ನ ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ ಎಂದು ಕಾನುವಳ್ಳಿ ಚಂದ್ರಶೇಖರ್ ಸಭೆಗೆ ತಿಳಿಸಿದರು.
ಸಭಾಧ್ಯಕ್ಷೆ ಸವಿತಾ ಶಿವಶಂಕರ್ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಂದಲ್ಲಿ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮನೆ ಕಟ್ಟಿಕೊಂಡ ಕಂದಾಯ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಗ್ರಾಪಂ ಈಗಾಗಲೇ ಯೋಜನೆ ರೂಪಿಸಿದೆ. ರಸ್ತೆಗೆ ಬಾಗಿಕೊಂಡಿರುವ ಮರದ ಕೊಂಬೆಗಳನ್ನು ತೆಗೆಸಲು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾಮರಿಯಪ್ಪ, ಸದಸ್ಯರಾದ ರಾಜುಶೂನ್ಯ, ಪಿಡಿಒ ಶಕುಂತಲಾ, ಗ್ರಾಮಸ್ಥರಾದ ಪಡುಬೈಲು ಹರೀಶ್,ವಿಶ್ವನಾಥ್,ಅಂಗುರ್ಡಿ ದಿನೇಶ್ ಉಪಸ್ಥಿತರಿದ್ದರು.