

ಬೆಂಗಳೂರು: ಸ್ವಚ್ಛ ಬೆಂಗಳೂರು’ ಪರಿಕಲ್ಪನೆ ಅಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಶನಿವಾರ ನಡೆಸಲಾಯಿತು.
ಪೂರ್ವ ವಲಯದ ಹಲಸೂರು ಕೆರೆಯಲ್ಲಿ ಹೂಳೆತ್ತಲಾಯಿತು. ಪುಲಕೇಶಿನಗರ ವಿಭಾಗದ ಸುಲ್ತಾನಪಾಳ್ಯ, ಎಚ್‌ಬಿಆರ್ ಲೇಔಟ್ ಉಪವಿಭಾಗ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕ, ಬ್ಯಾನರ್, ನಾಗಾವರ ಪ್ರದೇಶಗಳಲ್ಲಿ ಟ್ರ್ಯಾಕ್ಟರ್ ಬಳಸಿ ರಸ್ತೆ ಬದಿಯಲ್ಲಿ ಬಿದ್ದಿದ್ದ ತ್ಯಾಜ್ಯ, ಕಟ್ಟಡ ಭಗ್ನಾವಶೇಷ ತೆರವುಗೊಳಿಸಲಾಯಿತು. ಪಶ್ಚಿಮ ವಲಯದ ಮಹಾಲಕ್ಷ್ಮಿಪುರ, ಚಾಮರಾಜಪೇಟೆ ವಿಭಾಗದ ಜಗಜೀವನ್‌ರಾಮ್ ನಗರ, ಹಳೆಗುಡ್ಡದಹಳ್ಳಿ ರಸ್ತೆ ಇಕ್ಕೆಲಗಳಲ್ಲಿನ ಕಟ್ಟಡ ಭಗ್ನಾವಶೇಷ, ತ್ಯಾಜ್ಯ ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.
ವಲಯ ಆಯುಕ್ತ ಡಾ.ಬಿ.ಸಿಸತೀಶ್, ಜಂಟಿ ಆಯುಕ್ತೆ ಆರತಿ ಆನಂದ್ ನೇತೃತ್ವದಲ್ಲಿ ಆರ್.ಆರ್.ನಗರ ವಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಲಗ್ಗೆರೆ ಮುಖ್ಯರಸ್ತೆ,ಮುದ್ದಿನಪಾಳ್ಯ ಮುಖ್ಯರಸ್ತೆ ಇಕ್ಕೆಲಗಳಲ್ಲಿನ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳನ್ನು ತೆರವು ಮಾಡಲಾಯಿತು.
ಯಲಹಂಕ ವಲಯದ ದೊಡ್ಡಬಳ್ಳಾಪುರ ಮುಖ್ಯರಸ್ತೆ, ಯಲಹಂಕ ನ್ಯೂಟೌನ್ ಮಾಂಸದ ಅಂಗಡಿಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಸ್ವಚ್ಛತೆಯನ್ನು ಪರಿಶೀಲಿಸಿದರು. ಇದೇವೇಳೆ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದವರಿಗೆ ದಂಡ ವಿಧಿಸಲಾಯಿತು. ಅನಂತಪುರ ಗೇಟ್ ಬಳಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಯಿತು. ಎಂಸಿಎಚ್‌ಸಿ ಬಡಾವಣೆ, ಜಕ್ಕೂರಿನ ಕೆ.ವಿ.ಜೈರಾಂ ರಸ್ತೆ, ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿ ಉಪವಿಭಾಗದ ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಕಾರ್ಯಾಚರಣೆ ವೇಳೆ ಆಯಾ ವಲಯಗಳ ಜಂಟಿ ಆಯುಕ್ತರು, ಮುಖ್ಯ ಅಭಿಯಂತರ, ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿ ಮತ್ತಿತರರಿದ್ದರು.