ದಡ್ಡಿ ಸೂರನಾಯಕನ ಜಾತ್ರೆ ಫೆ.2 ರಿಂದ

dj clk heerehalli
Published on

ಚಳ್ಳಕೆರೆ: ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಫೆ.2ರಿಂದ ಆರಂಭವಾಗಲಿರುವ ಬುಡಕಟ್ಟು ಸಂಸ್ಕೃತಿಯ ದಡ್ಡಿ ಸೂರನಾಯಕನ ಜಾತ್ರಾ ಮಹೋತ್ಸವಕ್ಕೆ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಜಿ.ರಾಜಣ್ಣ ಹೇಳಿದರು.

5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಿರೇಹಳ್ಳಿ ದೊಡ್ಡ ಗ್ರಾಮ. ಮೂರು ದಿನಗಳ ಕಾಲ ನಡೆಯುವ ಜಾತ್ರೋತ್ಸವಕ್ಕೆ ಚರಂಡಿ ದುರಸ್ತಿ ಸೇರಿದಂತೆ ಮೂಲ ಸೌಕರ್ಯಕ್ಕೆ ಪಂಚಾಯಿತಿ ವತಿಯಿಂದ ಶುಕ್ರವಾರ ಕಾರ್ಯಾರಂಭ ಮಾಡಿ ಮಾತನಾಡಿದರು.

ಜಾತ್ರೆಗೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದು, ಅವರ ಅನುಕೂಲಕ್ಕಾಗಿ ಸಕಲ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಬುಡಕಟ್ಟು ಸಮುದಾಯಗಳೇ ಹೆಚ್ಚಾಗಿ ವಾಸವಿರುವ ಗ್ರಾಮದಲ್ಲಿ ಆಚರಿಸುವ ದಡ್ಡಿ ಸೂರನಾಯಕನ ಜಾತ್ರೆಗೆ ಐತಿಹಾಸಿಕ ಹಿನ್ನೆಲೆಯಿದೆ ಎಂದು ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ಮಂಜಮ್ಮ ಮಾತನಾಡಿ, ದಡ್ಡಿ ಸೂರನಾಯಕನ ಜಾತ್ರೆ ವಿಶೇಷ ಪದ್ಧತಿಗಳ ಬುಡಕಟ್ಟು ಆಚರಣೆಯಾಗಿದೆ. ಜಾತ್ರೆಯಲ್ಲಿ ದೇವರ ಎತ್ತುಗಳೇ ಪ್ರಧಾನವಾಗಿ ಪೂಜಿಸಲ್ಪಡುತ್ತವೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಿಂದ ದೇವರ ಎತ್ತುಗಳನ್ನು ಕರೆ ತರಲಾಗುತ್ತದೆ ಎಂದರು.

ಗ್ರಾಮದ ಹೊರವಲಯ ಪುಟ್ಟಣ್ಣರ ಶೇಖರಪ್ಪ ಎಂಬುವರ ಜಮೀನಿನಲ್ಲಿ ದೇವರ ಎತ್ತುಗಳು ಎರಡು ದಿನ ಬೀಡು ಬಿಡಲಾಗುತ್ತದೆ. ದಡ್ಡಿ ಸೂರನಾಯಕನ ಗುಡಿಕಟ್ಟಿನ ಭಕ್ತರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಬುಡಕಟ್ಟು ಜನಾಂಗದವರು ಎರಡು ದಿನ ದೇವರ ಎತ್ತುಗಳ ಜತೆ ಉಳಿದುಕೊಳ್ಳುತ್ತಾರೆ ಎಂದು ಹೇಳಿದರು.

ಜಾತ್ರೆಯ 3ನೇ ದಿನ ದಡ್ಡಿ ಸೂರನಾಯಕನ ದೇವಸ್ಥಾನದ ಮುಂದೆ ಎತ್ತುಗಳನ್ನು ಮೆರೆಸಲಾಗುತ್ತದೆ. 20 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ಎತ್ತುಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ದೇವರ ಎತ್ತುಗಳ ಮೇಲೆ ಸೂರು ಮೆಣಸು ತೂರಿ, ಬಾಳೆಹಣ್ಣು, ಬೆಲ್ಲ, ಹುರುಳಿ ಪದಾರ್ಥಗಳನ್ನು ಎತ್ತುಗಳಿಗೆ ತಿನ್ನಿಸಿ ಕುಟುಂಬದ ಇಷ್ಟಾರ್ಥ ಕಾರ್ಯಗಳು ನೆರವೇರಲಿ ಎಂದು ಬೇಡಿಕೊಳ್ಳುತ್ತಾರೆ ಎಂದರು.

ಗ್ರಾಪಂ ಉಪಾಧ್ಯಕ್ಷ ಒ.ರವಿ, ಸದಸ್ಯರಾದ ಎಸ್.ರಾಜಣ್ಣ, ತಿಪ್ಪಕ್ಕ, ಮಂಜುನಾಥ, ನರಸಿಂಹಪ್ಪ, ಪ್ರೇಮಕ್ಕ, ರಾಧಮ್ಮ, ನಾಗರತ್ನಮ್ಮ, ಪಾಲಾಕ್ಷಮ್ಮ, ಜಿ.ತಿಪ್ಪೇಸ್ವಾಮಿ, ವೈ.ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net