

ಬೆಟ್ಟದಪುರ: ಇಲ್ಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಮೆಲ್ಭಾಗದಲ್ಲಿ ಭಾನುವಾರ ರಾವಂದೂರಿನ ಶಿವು ಸೈನಿಕ ಅಕಾಡೆಮಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಗ್ರಾಮದಲ್ಲಿ ಇತ್ತೀಚೆಗೆ ಶ್ರೀಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೀವಟಿಗೆ ಮಹೋತ್ಸವ ನಡೆದಿದ್ದು, ಭಕ್ತರು, ಯುವಕ-ಯುವತಿಯರು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ ಸೇರಿದಂತೆ ತ್ಯಾಜ್ಯವಸ್ತುಗಳನ್ನು ಬಿಸಾಡಿ ಹೋಗಿದ್ದರು. ಪರಿಣಾಮ ಅಶುಚಿತ್ವ ತಾಂಡವವಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅಕಾಡೆಮಿ ಮುಖ್ಯಸ್ಥ ಶಿವು ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಹಬ್ಬ ಹರಿದಿನಗಳಲ್ಲಿ ಬರುವ ಭಕ್ತರು ದೇವರ ದರ್ಶನ ಪಡೆಯುವುದರ ಜತೆಗೆ ಆ ಪುಣ್ಯಕ್ಷೇತ್ರದ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ನಮ್ಮ ಸುತ್ತಮುತ್ತಲಿನ ಸ್ಥಳದ ಸುಂದರವನ್ನು ಕಾಪಾಡುವುದರ ಜತೆಗೆ ನೈರ್ಮಲ್ಯತೆಗೆ ಒತ್ತು ನೀಡಬೇಕು. ಧಾರ್ಮಿಕ ಕ್ಷೇತ್ರಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ತಾಣಗಳಾಗಿದ್ದು, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಿವು ಹೇಳಿದರು.