ಸುಳ್ಯ: ಸ್ವಚ್ಛತೆ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಆಚರಿಸುವಂತಾಗಬೇಕು. ಹಾಗಾದಾಗ ಸಮಾಜ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರ ನಿರ್ಮಲವಾಗಿರುತ್ತದೆ ಎಂದು ತಹಸೀಲ್ದಾರ್ ಅರವಿಂದ ಕೆ.ಎಂ.ಹೇಳಿದರು.
ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯದಡಿಯಲ್ಲಿ ಸುಳ್ಯ ಅಮರ ಸಂಘಟನಾ ಸಮಿತಿ, ನಗರ ಪಂಚಾಯತಿ ಸುಳ್ಯ ಹಾಗೂ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬುಧವಾರ ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷ ಸ್ವಾತಿಕ್ ಮಡಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ.ಪಂ. ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್, ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್, ಸುಳ್ಯ ವಕೀಲರ ಸಂಘದ ಕಾರ್ಯದರ್ಶಿ ಜಗದೀಶ್ ಡಿ.ಪಿ., ಸಾಮಾಜಿಕ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ವಿ.ಎಚ್.ಕರಣಿಮಠ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ, ಪ್ರಭಾಕರನ್ ನಾಯರ್, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ ಮೊದಲಾದವರು ಶುಭಹಾರೈಸಿದರು.
ಸ್ವಚ್ಛತೆ ಕಾರ್ಯ ಜ್ಯೋತಿ ವೃತ್ತದಿಂದ ಪ್ರಾರಂಭವಾಗಿ ಗಾಂಧಿನಗರದವರೆಗೆ ಸಾಗಿ ನಂತರ ಎ.ಪಿ.ಎಂ.ಸಿ ವಠಾರದಲ್ಲಿ ಸಮಾಪ್ತಿ ಗೊಂಡಿತು. ಸ್ವಚ್ಛ ಸೇವಾ ಕಾರ್ಯಕ್ಕೆ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು, ಅಧಿಕಾರಿಗಳು, ಶಾಲಾ ಶಿಕ್ಷಕರು, ಉಪನ್ಯಾಸಕರು ಕೈ ಜೋಡಿಸಿದರು. ಅಮರ ಸಂಘಟನಾ ಸಮಿತಿ ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.
ಸಂಘಟನೆ ವತಿಯಿಂದ ಗಣ್ಯರಿಗೆ ಗಿಡಗಳನ್ನು ನೀಡಿ ಗೌರವಿಸಲಾಯಿತು. ನಳಿನಾಕ್ಷಿ ಆಚಾರ್ಯ ನಿರೂಪಿಸಿ ಸಂಘದ ಪದಾಧಿಕಾರಿಗಳಾದ ಜಯಪ್ರಕಾಶ್ ಸಂಕೇಶ್ ಸ್ವಾಗತಿಸಿ, ಪ್ರದೀಪ್ ಬೊಳ್ಳೂರು ವಂದಿಸಿದರು.
ಗಾಂಧಿಜಯಂತಿ ಅಂಗವಾಗಿ ಸುಳ್ಯ ಬಿಜೆಪಿ ಮಂಡಲ ಕಚೇರಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಮುಖಂಡರಾದ ಶುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ.ನಿರಬಿದಿರೆ, ಸದಸ್ಯರುಗಳಾದ ಶಿಲ್ಪಾ ಸುದೇವ್, ಶೀಲಾ ಕುರುಂಜಿ ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಗಾಂಧಿ ಜಯಂತಿ ಪ್ರಯುಕ್ತ ಯುವಕ ಮಂಡಲ ಉಬರಡ್ಕ ಮಿತ್ತೂರು ಹಾಗೂ ಗ್ರಾಮ ಪಂಚಾಯಿತಿ ಉಬರಡ್ಕ ಮಿತ್ತೂರು ಇದರ ವತಿಯಿಂದ ಉಬರಡ್ಕ ಬಸ್ ತಂಗುದಾಣ ಸ್ವಚ್ಛತೆ ಮತ್ತು ಉಬರಡ್ಕ ಪೇಟೆಯಲ್ಲಿ ಬುಧವಾರ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯುವಕ ಮಂಡಲದ ಎಲ್ಲ ಪದಾಧಿಕಾರಿಗಳು, ಪಂಚಾಯಿತಿ ಪಿ.ಡಿ.ಒ, ಅಧ್ಯಕ್ಷರು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.